ವಿಮಾನ ಅಪಘಾತಕ್ಕೀಡಾಗಿ 12 ಮಂದಿ ದುರ್ಮರಣ

ಸ್ಯಾನ್ ಜೋಸ್: ಕೋಸ್ಟಾರಿಕಾದಲ್ಲಿ ವಿಮಾನ ಅಪಘಾತಕ್ಕೀಡಾಗಿ 12 ಮಂದಿ ಮೃತಪಟ್ಟ ಘಟನೆ ನಡೆದಿದೆ.

ಕೊಸ್ಟಾರಿಕಾ ರಾಜಧಾನಿ ಸ್ಯಾನ್ ಜೋಸ್‍ನಿಂದ ಸುಮಾರು 230 ಕಿಮೀ ದೂರದಲ್ಲಿರೋ ಪ್ರಸಿದ್ಧ ಪ್ರವಾಸಿ ತಾಣ ಪಂಟಾ ಇಸ್ಲಿಟಾ ಎಂಬ ಶಿಖರದಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರಲ್ಲಿ 10 ಮಂದಿ ಅಮೆರಿಕ ಪ್ರಜೆಗಳು ಹಾಗೂ ಇಬ್ಬರು ಸ್ಥಳೀಯ ಪೈಲಟ್ ಗಳಾಗಿದ್ದಾರೆ ಎಂದು ಕೊಸ್ಟಾರಿಕಾ ಸರ್ಕಾರ ಹೇಳಿದೆ. ಘಟನೆಗೆ ಕಾರಣವೇನೆಂದು ಇನ್ನಷ್ಟೇ ತಿಳಿದುಬರಬೇಕಿದೆ ಅಂತ ಅಲ್ಲಿನ ಭದ್ರತಾ ಸಚಿವಾಲಯ ತಿಳಿಸಿದೆ.

ನಾಗರಿಕಾ ವಿಮಾನಯಾನ ಸಂಸ್ಥೆಯ ನಿರ್ದೇಶಕ ಎನಿಯೊ ಕುಬಿಲ್ಲೊ ಅವರು ಸ್ಥಳಿಯ ಮಾಧ್ಯಮಗಳ ಜೊತೆ ಘಟನೆ ಕುರಿತು ಮಾತನಾಡಿ, ಘಟನೆಯಲ್ಲಿ 10 ವಿದೇಶಿ ಪ್ರವಾಸಿಗರು ಹಾಗೂ ಇಬ್ಬರು ಸ್ಥಳೀಯ ಪೈಲೆಟ್ ಗಳು ದುರ್ಮರಣಕ್ಕೀಡಾಗಿದ್ದಾರೆ ಅಂತ ಹೇಳಿದ್ದಾರೆ.

2010 ರಿಂದ 2014ರ ವರೆಗೆ ಕೋಸ್ಟಾರಿಕಾದ ಅಧ್ಯಕ್ಷರಾಗಿದ್ದ ಲಾರಾ ಚಿಂಚಿಲ್ಲಾ, ತನ್ನ ಸೋದರ ಸಂಬಂಧಿಯೊಬ್ಬರು ವಿಮಾನ ದುರಂತದಲ್ಲಿ ಮೃತಪಟ್ಟಿರುವ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ. ದುರಂತದಿಂದಾಗಿ ವಿಮಾನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸಂಪೂರ್ಣ ಸುಟ್ಟು ಹೋಗಿದೆ. ಹೀಗಾಗಿ ಮೃತರ ಪತ್ತೆಗೆ ಶವಪರೀಕ್ಷೆ ನಡೆಸಬೇಕಿದೆ ಎಂದು ಭದ್ರತಾ ಸಚಿವ ಗುಸ್ಟಾವೊ ಮಾತಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *