ಗುಡ್‍ಬೈ 2019, ವೆಲ್‍ಕಂ 2020- ದೇಶದೆಲ್ಲೆಡೆ ಹೊಸ ವರ್ಷ ಸಂಭ್ರಮಾಚರಣೆ

– ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ಗಳು ವರ್ಣರಂಜಿತ
– ಬೆಂಗಳೂರು, ಮಂಗಳೂರಿನಲ್ಲಿ ಸಂಭ್ರಮದ ಮೇಲೆ ಖಾಕಿ ಕಣ್ಣು

ಬೆಂಗಳೂರು: “ಗುಡ್‍ಬೈ 2019, ವೆಲ್‍ಕಂ 2020”. ಹೊಸ ವರ್ಷಕ್ಕೆ ಭಾರತ ಕಾಲಿಟ್ಟಿದ್ದು, ರಾಜ್ಯದ ಜನತೆ 2020ನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.

ದೇಶಾದ್ಯಂತ ಹೊಸವರ್ಷದ ಆಚರಣೆ ರಂಗೇರಿತ್ತು. ನ್ಯೂ ಇಯರ್ ಹ್ಯಾಂಗೋವರ್‍ನಲ್ಲಿ ಬೆಂಗಳೂರು ಮಿಂದೆದ್ದಿದ್ದು, ಹೊಸ ವರ್ಷದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಏರಿಯಾಗಳಾದ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ಗಳು ವರ್ಣರಂಜಿತವಾಗಿ ಮಿರಿ ಮಿರಿ ಮಿಂಚುತ್ತಿದ್ದವು. ಯುವಕ-ಯುವತಿಯರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿ, ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

ಪೊಲೀಸರು ಕೂಡ ಹಿಂದೆಂದೂ ಕೇಳಿರದ ಮಟ್ಟಿಗೆ ಟೈಟ್ ಮೇಲೆ ಟೈಟ್ ಸೆಕ್ಯೂರಿಟಿ ಮಾಡಿಕೊಂಡಿದ್ದರು. ಪೊಲೀಸರು ಇಲ್ಲ ಎಂದುಕೊಂಡರೂ ಚಲನವಲನ, ಕಿಡಿಗೇಡಿ ಕೆಲಸಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿವೆ. ಇದಕ್ಕಾಗಿ, 12 ಗಂಟೆ ಹೊತ್ತಲ್ಲಿ ಸಂಭ್ರಮಕ್ಕಾಗಿ ಲೈಟ್ಸ್ ಆಫ್ ಮಾಡದಂತೆ ಪೊಲೀಸರು ಸೂಚಿಸಿದ್ದರು. ಸಂಚಾರಿ ಪೊಲೀಸರು ಕೂಡ ನಗರದಾದ್ಯಂತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರು.

ಫ್ಲೈ ಓವರ್‍ಗಳನ್ನು ಬಂದ್ ಮಾಡಿ, ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದರು. ಹೊಸ ವರ್ಷದ ಪಾರ್ಟಿ ಕುಡುಕರಿಗೆ ರಾಜಮರ್ಯಾದೆ ನೀಡಲಾಗಿತ್ತು. ಕುಡಿದು ಟೈಟ್ ಆಗೋ ಮದ್ಯ ಶೂರರಿಗೆ ಸೆಕ್ಯೂರಿಟಿ ಐಲ್ಯಾಂಡ್ ಹೆಸರಿನಲ್ಲಿ ಕೋರಮಂಗಲದಲ್ಲಿ 18 ಕುಡುಕರ ಆಶ್ರಯ ಕೇಂದ್ರ ಸ್ಥಾಪಿಸಿದ್ದರು. ಕರ್ಲಾನ್ ಬೆಡ್, ದಿಂಬಿನ ವ್ಯವಸ್ಥೆ ಸಹ ಮಾಡಲಾಗಿತ್ತು. ಇವರನ್ನು ಕರೆತರಲು ಓಲಾ, ಉಬರ್, ಅಂಬುಲೆನ್ಸ್ ಗಳನ್ನೂ ತಯಾರಿಯಲ್ಲಿಟ್ಟುಕೊಂಡಿದ್ದರು.

ಮಧ್ಯರಾತ್ರಿ 2 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ವೈನ್‍ಶಾಪ್‍ಗಳಿಗೆ ರಾತ್ರಿ 11, ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೆ ಮಧ್ಯರಾತ್ರಿ 1, ಮದ್ಯ ಮಾರಾಟಕ್ಕೆ ಮಧ್ಯರಾತ್ರಿ 2 ಗಂಟೆವರೆಗೆ ಅವಕಾಶ ನೀಡಲಾಗಿದೆ. ಕೋರಮಂಗಲ, ಇಂದಿರಾ ನಗರ, ಮಹದೇವಪುರ, ವೈಟ್‍ಫೀಲ್ಡ್, ಮಾರತ್‍ಹಳ್ಳಿ, ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್‍ಗಳು, ಮಾಲ್‍ಗಳು, ಥಿಯೇಟರ್‍ಗಳಲ್ಲಿ ಜನವೋ ಜನ. ರಾಜ್ಯದ ಮಂಗಳೂರು, ಮಡಿಕೇರಿ, ಮೈಸೂರು ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ಕೋಲಾರಗಳಲ್ಲೂ ಭಾರೀ ಸಂಭ್ರಮ ಇತ್ತು. ಗೋಲಿಬಾರ್ ನಡೆದಿರುವ ಮಂಗಳೂರಿನಲ್ಲಂತೂ ಯಾರೂ ಕೆಮ್ಮಂಗಿಲ್ಲ. ಬಾಲಬಿಚ್ಚಂಗಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ದೆಹಲಿ, ಪಂಜಾಬ್, ಮುಂಬೈ, ಗೋವಾ, ಕೇರಳದ ಬೀಚ್‍ಗಳು, ಚೆನ್ನೈ, ಕೋಲ್ಕತ್ತಾ, ಎಲ್‍ಒಸಿಯಲ್ಲಿ ಸೈನಿಕರು ಹೀಗೇ ದೇಶಾದ್ಯಂತ ಸಂಭ್ರಮ ಮನೆ ಮಾಡಿತ್ತು. ವಿಶ್ವಾದ್ಯಂತ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ನ್ಯೂಜಿಲೆಂಡ್‍ನ ಆಕ್ಲೆಂಡ್, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಹ ಸಂಭ್ರಮ ಮನೆ ಮಾಡಿತ್ತು. ಹಾಂಕಾಂಗ್, ಫಿಜಿ, ಇಂಗ್ಲೆಂಡ್, ಅಮೆರಿಕ, ಬ್ರೆಜಿಲ್, ದುಬೈನ ಬುರ್ಜ್ ಖಲೀಫಾದಲ್ಲಿ ಚಿತ್ತಾಕರ್ಷಕ ಬಾಣಬಿರುಸು, ವರ್ಣರಂಚಿತ ಫೈರ್ ವರ್ಕ್‍ಗಳು ಕಣ್ಮನ ಸೆಳೆದೆವು.

Comments

Leave a Reply

Your email address will not be published. Required fields are marked *