ಛತ್ತೀಸ್‍ಗಢದ ಹಾಲಿ ಸಂಸದರಿಗೆ ಬಿಜೆಪಿ ಶಾಕ್- ರಾಜ್ಯ ಬಿಜೆಪಿಯಲ್ಲಿ ಸಂಚಲನ

ಬೆಂಗಳೂರು: ಆಡಳಿತ ವಿರೋಧಿ ಅಲೆ ಇರುವ ಛತ್ತೀಸ್‍ಗಢದ ಸಂಸದರಿಗೆ ಬಿಜೆಪಿ ಹೈಕಮಾಂಡ್ ಕೊಕ್ ನೀಡಲು ಮುಂದಾಗಿದೆ. ಛತ್ತೀಸ್‍ಗಢದಂತೆ ರಾಜ್ಯದಲ್ಲಿಯೂ ಹಾಲಿ ಸಂಸದರಿಗೆ ಕೊಕ್ ನೀಡಲಾಗುತ್ತಾ ಎಂಬ ಪ್ರಶ್ನೆಯೊಂದು ಕರುನಾಡಿನ ಕಮಲ ಪಾಳಯದಲ್ಲಿ ಹುಟ್ಟಿಕೊಂಡಿದೆ.

ಛತ್ತೀಸ್‍ಗಢದಲ್ಲಿರುವ 11 ಸ್ಥಾನಗಳ ಪೈಕಿ 10 ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರನ್ನು ಹೊಂದಿದೆ. ಆದ್ರೆ ಛತ್ತೀಸ್‍ಗಢನಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾದ ಪರಿಣಾಮ 11 ಕ್ಷೇತ್ರಗಳಿಗೂ ಹೊಸ ಅಭ್ಯರ್ಥಿಗಳನ್ನು ಹುಡುಕಿ ಎಂದು ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚಿಸಿದೆ ಎನ್ನಲಾಗಿದೆ. ಪರಿಣಾಮ ಈ ಬಾರಿ ಛತ್ತೀಸ್‍ಗಢದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಹೊಸ ಅಭ್ಯರ್ಥಿಗಳು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಕರ್ನಾಟಕದಲ್ಲಿಯೂ ಕೆಲ ಸಂಸದರಿಗೆ ಟಿಕೆಟ್ ನೀಡಬಾರದೆಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಛತ್ತೀಸ್‍ಗಢದಂತೆ ಇಲ್ಲಿಯೂ ಹೊಸ ಮುಖಗಳಿಗೆ ಮಣೆ ಹಾಕುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಮಂಗಳೂರಿನ ನಳಿನ್ ಕುಮಾರ್ ಕಟೀಲ್, ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬೆಳಗಾವಿಯ ಸುರೇಶ್ ಅಂಗಡಿ ಸೇರಿ ಹಲವರ ಮೇಲೆ ಆಡಳಿತ ವಿರೋಧಿ ಅಲೆ ಹೆಚ್ಚಾಗಿದೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ರಾಜ್ಯದ ಹಾಲಿ ಸಂಸದರಿಗೂ ಬಿಜೆಪಿ ಹೈಕಮಾಂಡ್ ಕೊಕ್ ಕೊಡುತ್ತಾ ಅಥವಾ ಉಳಿಸಿಕೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ.

Comments

Leave a Reply

Your email address will not be published. Required fields are marked *