ಹಳೆ ಫೋನ್ ದೂರ ಎಸೆದವರಿಗೆ ಹೊಸ ಸ್ಮಾರ್ಟ್ ಫೋನ್- ಸ್ಪರ್ಧೆಯಲ್ಲಿ ಭಾಗವಹಿಸಲು ಮುಗಿಬಿದ್ದ ಜನ!

ಉಡುಪಿ: ಮೊಬೈಲ್ ಜಮಾನಾದಲ್ಲಿ ನಾವಿದ್ದೇವೆ. ಬೆಳಗ್ಗೆ ಎದ್ದು ರಾತ್ರಿ ಮಲಗೋ ತನಕ ಮೊಬೈಲ್ ಇಲ್ಲದೆ ಯಾವುದೂ ಆಗುವುದಿಲ್ಲ. ಆದರೆ ಜಿಲ್ಲೆಯ ಕುಂದಾಪುರದಲ್ಲಿ ಜನಕ್ಕೆಲ್ಲ ಮೊಬೈಲ್ ಮೇಲೆ ಜಿಗುಪ್ಸೆ ಬಂದಂತೆ ಇತ್ತು. ತಮ್ಮ ಬಳಿಯಿದ್ದ ಮೊಬೈಲನ್ನು ಜೇಬಿಂದ ತೆಗೆದು ಜನ ಎತ್ತಿ ಎತ್ತಿ ಬಿಸಾಕುತ್ತಿದ್ದರು. ನಾ ಮುಂದು ತಾ ಮುಂದು ಅಂತ ಬಂದು ದೂರ ದೂರ ಮೊಬೈಲನ್ನು ಎಸೆಯುತ್ತಿದ್ದರು.

ಕುಂದಾಪುರ ತಾಲೂಕಿನ ಗೋಳಿಯಂಗಡಿಯಲ್ಲಿ ನಡೆದ ವಿಶೇಷ ಸ್ಪರ್ಧೆ ಇದು. ಪ್ರಗತಿ ಎಂಟರ್‍ಪ್ರೈಸಸ್ ಮೊಬೈಲ್ ಅಂಗಡಿ ಈ ಸ್ಪರ್ಧೆಯನ್ನು ಆಯೋಜನೆ ಮಾಡಿತ್ತು. ತಮ್ಮ ಬಳಿಯಿದ್ದ ಹಳೆಯ ಅಥವಾ ಕಾರ್ಯನಿರ್ವಹಿಸದೇ ಇರುವ ಮೊಬೈಲನ್ನು ಯಾರು ದೂರಕ್ಕೆ ಎಸೆಯುತ್ತಾರೋ ನಿಯಮಗಳ ಪ್ರಕಾರ ಅವರು ಗೆದ್ದಂತೆ.

ತಮ್ಮ ಹಳೆಯ ಮೊಬೈಲನ್ನು ದೂರ ಎಸೆದು ಗೆದ್ದವರಿಗೆ ಹೊಸದೊಂದು ಸ್ಮಾರ್ಟ್ ಫೋನ್ ಮೊಬೈಲ್ ನೀಡುವುದಾಗಿ ಆಯೋಜಕರು ಘೋಷಿಸಿದ್ದರು. ಹೀಗಾಗಿ ಸುತ್ತ ಹತ್ತೂರಿನ ನೂರಾರು ಮಂದಿ ಮೊಬೈಲ್ ಎಸೆಯೋ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮೈದಾನದಲ್ಲಿ ಕ್ರಿಕೆಟ್ ಆಟದ ಸಂದರ್ಭ ಫೀಲ್ಡರ್ ಬಾಲ್ ಎಸೆಯುವಂತೆ ಯುವಕರು ತಮ್ಮ ತಮ್ಮ ಮೊಬೈಲ್‍ಗಳನ್ನು ಎಸೆದಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಮೊಬೈಲ್ ಅಂಗಡಿಯ ಪ್ರಚಾರ. ಅಲ್ಲದೇ ಜನರಿಗೆ ಮನರಂಜನೆಯ ಜೊತೆ ಮೊಬೈಲ್ ಅಂಗಡಿಯ ಪ್ರಚಾರದ ಐಡಿಯಾವನ್ನು ಗೋಳಿಯಂಗಡಿ ಗೆಳಯರಬಳಗೆ ನೀಡಿದೆ.

ಆಯೋಜಕ ರೂಪೇಶ್ ಕುಮಾರ್, ಪಬ್ಲಿಕ್ ಟಿವಿ ಜೊತೆ ಮಾತಾಡಿ, ನಮ್ಮ ಮಳಿಗೆಯ ಪ್ರಚಾರದ ಜೊತೆ ಜನರ ಮನೋರಂಜನೆಗಾಗಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ರಾಜ್ಯಾದ್ಯಂತ ರೆಸ್ಪಾನ್ಸ್ ಇತ್ತು. ಆದರೆ ಎಲ್ಲರನ್ನೂ ಕರೆಸಿಲ್ಲ. ಮುಂದೆ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದು ಹೇಳಿದರು.

ಹಳೇ ಫೋನ್ ರೇಡಿಯೇಷನ್ ನಿಂದ ಆರೋಗ್ಯ ಸಮಸ್ಯೆ ಬರಬಹುದು. ಬ್ಯಾಟರಿ ಕೂಡ ಬ್ಲಾಸ್ಟ್ ಆಗಬಹುದು. ಹಳೇ ಮೊಬೈಲ್ ಮನೆಯಲ್ಲಿ ಇಟ್ಟುಕೊಳ್ಳಬೇಡಿ ಎನ್ನುವ ಸಂದೇಶ ಈ ಕಾರ್ಯಕ್ರಮದಲ್ಲಿ ಇದೆ ಎಂದು ಸ್ಥಳೀಯರಾದ ಗಣೇಶ್ ಗೋಳಿಯಂಗಡಿ ತಿಳಿಸಿದರು.

ಆಯೋಜಕರು ಮೊಬೈಲ್ ಎಸೆತ ಸಂದರ್ಭ ಒಟ್ಟಾದ ನೂರಾರು ಹಳೆಯ ಕೆಲವು ಮೊಬೈಲ್ ಗಳ ಬಿಡಿಭಾಗಗಳನ್ನು ತೆಗೆದು ಮುಂದೆ ಉಪಯೋಗ ಮಾಡುತ್ತಾರೆ. ಅಲ್ಲದೇ ಗ್ರಾಹಕರಿಗೆ ಕಡಿಮೆ ಬೆಲೆಗೆ ಬಿಡಿಭಾಗ ಅಳವಡಿಸಿಕೊಡುತ್ತಾರೆ. ಇದಲ್ಲದೇ ಇ-ವೇಸ್ಟ್ ಖರೀದಿ ಕಂಪೆನಿಯನ್ನು ಸಂಪರ್ಕಿಸಿದ್ದು, ಎಲ್ಲಾ ಮೊಬೈಲ್ ಖರೀದಿ ಮಾಡುವ ಭರವಸೆಯನ್ನು ಕಂಪೆನಿ ನೀಡಿದೆ.

ಕಾರ್ಯಕ್ರಮದಲ್ಲಿ ಶೇಖರ್ ಸೆಟ್ಟೊಳ್ಳಿ ಎಂಬವರು 77.90 ಮೀಟರ್ ದೂರ ಮೊಬೈಲ್ ಎಸೆಯುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡು 4ಜಿ ಸ್ಮಾರ್ಟ್ ಫೋನನ್ನು ತಮ್ಮದಾಗಿಸಿಕೊಂಡರು. 72.70 ಮೀ ದೂರ ಎಸೆಯುವ ಮೂಲಕ ದ್ವಿತೀಯ ಸ್ಥಾನವನ್ನು ರಾಜೇಶ್ ಸೆಟ್ಟೊಳ್ಳಿ ಪಡೆದುಕೊಂಡು ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನನ್ನು ಗೆದ್ದಿದ್ದಾರೆ.

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *