ನೂತನ ಸರ್ಕಾರದಿಂದ ನಾಡಿನ ರೈತರಿಗೆ ಮೊದಲ ಶಾಕ್

ಬೆಂಗಳೂರು: ನೂತನ ಸಮ್ಮಿಶ್ರ ಸರ್ಕಾರ ನಾಡಿನ ರೈತರಿಗೆ ಮೊದಲ ಶಾಕ್ ನೀಡಿದೆ. ಹಾಲಿನ ಖರೀದಿ ದರವನ್ನು 2 ರೂ. ಕಡಿತಗೊಳಿಸಲಾಗಿದೆ. ಜೂನ್ 1ರಿಂದ ಹಾಲಿನ ದರ ಅನ್ವಯವಾಗುವಂತೆ ದರ ಕಡಿತಗೊಳಿಸಲಾಗಿದೆ. ಕೆಎಂಎಫ್‍ನ ನಾನಾ ಒಕ್ಕೂಟಗಳಿಂದ ದರ ಕಡಿತ ಮಾಡಲಾಗಿದೆ. ಕೆಎಂಎಫ್‍ನ ಕೆಲ ಒಕ್ಕೂಟಗಳು ಪ್ರತಿ ಲೀಟರ್ ಗೆ 1.50-2 ರೂ.ಕಡಿತ ಮಾಡಿವೆ.

ದರ ಇಳಿಕೆಗೆ ಕಾರಣ ಏನು ?
ಪ್ರತಿ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಹಾಲು ಉತ್ಪಾದನೆ ಹೆಚ್ಚಳವಾಗುತ್ತದೆ. ಮೇ-ಜೂನ್‍ನಲ್ಲಿ ಅತ್ಯಧಿಕ ಪ್ರಮಾಣದ ಹಾಲು ಉತ್ಪತ್ತಿಯಾಗುವ ಕಾರಣ ಹಾಲು ಒಕ್ಕೂಟಗಳಿಗೆ ಹೆಚ್ಚುವರಿ ಹಾಲು ಮಾರಾಟ ಮಾಡಲು ಆಗುವುದಿಲ್ಲ. ಈ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಿ ಸಂಗ್ರಹಿಸಿ ಇಡಬೇಕು, ಇಲ್ಲವೇ ಮಾರಾಟ ಮಾಡಬೇಕು. ಆದರೆ ಹಾಲಿನ ಪುಡಿಗೆ ಬೇಡಿಕೆ ಇಲ್ಲ. ಮುಂಗಾರು ಅವಧಿಯಲ್ಲಿ ಹಸಿರು ಮೇವು ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ ಹಾಲು ಉತ್ಪಾದನೆಯೂ ಹೆಚ್ಚಳವಾಗಲಿದೆ. ಈ ಕಾರಣಕ್ಕೆ ದರ ಇಳಿಕೆ ಮಾಡಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. ಪ್ರತಿ ವರ್ಷ ಕೆಲವು ತಿಂಗಳು ದರ ಇಳಿಕೆ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ.

 

ದಾಖಲೆಯ ಹಾಲು ಉತ್ಪಾದನೆ:
ಕೆಎಂಎಫ್‍ಗೆ ಸೇರಿದ ಹದಿನಾಲ್ಕು ಜಿಲ್ಲಾ ಒಕ್ಕೂಟಗಳಲ್ಲಿ ನಿತ್ಯ ಸರಾಸರಿ 75 ಲಕ್ಷ ಲೀ. ಹಾಲು ಶೇಖರಣೆಯಾಗುತ್ತಿದೆ. ಮೇ ತಿಂಗಳಲ್ಲಿ 77.88 ಲಕ್ಷ ಲೀ. ಹಾಲು ಸಂಗ್ರಹಗೊಂಡಿರುವುದು ಇದೂವರೆಗಿನ ದಾಖಲೆಯಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ 80 ಲಕ್ಷ ಲೀ.ಗೆ ಹೆಚ್ಚುವ ನಿರೀಕ್ಷೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿಗಿಂತ ಹೈನುಗಾರಿಕೆ ಲಾಭದಾಯಕ ಆಗಿರುವ ಕಾರಣ ಹಸು ಸಾಕಣೆಗೆ ಹೆಚ್ಚಿನ ಒಲವು ಕಂಡುಬಂದಿದೆ. ಗ್ರಾ.ಪಂ.ಗಳಲ್ಲಿ ಹಾಲು ಉತ್ಪಾದಕರ ಸಂಘಗಳು ಹೆಚ್ಚು ಸಕ್ರಿಯವಾಗಿರುವ ಕಾರಣ ಬಹುತೇಕ ಎಲ್ಲಾ ಒಕ್ಕೂಟಗಳಲ್ಲಿ ಕ್ಷೀರ ಉತ್ಪಾದನೆ ಏರುಮುಖಗೊಂಡಿದೆ.

ಹಾಲು ಉತ್ಪಾದಕರಿಂದ ಖರೀದಿ ದರ ಕಡಿತ ಆಯಾ ಒಕ್ಕೂಟಗಳು ಕೈಗೊಂಡಿವೆ. ಮಳೆಗಾಲದಲ್ಲಿ ಹಾಲು ಇಳುವರಿ ಹೆಚ್ಚಳವಾಗುವ ಕಾರಣ ಖರೀದಿ ದರ ಇಳಿಸುವುದು ಸ್ವಾಭಾವಿಕ. ಬೇಸಿಗೆಯಲ್ಲಿ ಮತ್ತೆ ಖರೀದಿ ದರ ಹೆಚ್ಚಳವಾಗುತ್ತದೆ. ಸದ್ಯಕ್ಕೆ ಈ ಪ್ರಕ್ರಿಯೆಯಿಂದ ಗ್ರಾಹಕರಿಗೆ ಹೊರೆ ಇಲ್ಲ.

ಹಾಲು ಸಂಗ್ರಹ, ಬಳಕೆ ವಿವರ:
ಕೆಎಂಎಫ್ ನಿತ್ಯ ಸರಾಸರಿ 75 ಲಕ್ಷ ಲೀ. ಹಾಲು ಸಂಗ್ರಹಿಸುತ್ತದೆ. ಈ ಪೈಕಿ 34 ಲಕ್ಷ ಲೀ. ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಮೊಸರು ತಯಾರಿಕೆಗೆ 4 ಲಕ್ಷ ಲೀ., ಗುಡ್ ಲೈಫ್ ಹಾಲು ತಯಾರಿಸಲು ಐದು ಲಕ್ಷ ಲೀ. ಹಾಗೂ ನಂದಿನಿ ಉತ್ಪನ್ನಗಳ ತಯಾರಿಕೆಗೆ ಐದು ಲಕ್ಷ ಲೀ. ಬಳಸಲಾಗುತ್ತದೆ. ಉಳಿದಿದ್ದನ್ನು ಹಾಲಿನ ಪುಡಿ ಮಾಡಲು ಬಳಸಿಕೊಳ್ಳಲಾಗುತ್ತದೆ. ಆದರೆ, ಉತ್ಪಾದನೆಯಾದ ಪೂರ್ಣ ಹಾಲಿ ಪುಡಿಯನ್ನು ಬಿಕರಿ ಮಾಡಲು ಸಾಧ್ಯವಾಗದಿರುವುದು ಹಾಲು ಉತ್ಪಾದಕರ ದರ ಕಡಿತಕ್ಕೆ ದಾರಿ ಮಾಡಿಕೊಟ್ಟಿದೆ ಎಂಬುದಾಗಿ ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *