ಹುಟ್ಟುಹಬ್ಬದಂದೇ ಸಚಿನ್ ಮಾನವೀಯತೆಯನ್ನು ನೆನೆದ ಸೆಹ್ವಾಗ್

– ತೆಂಡೂಲ್ಕರ್ ಎಂದೂ ಅಭಿಮಾನಿಗಳ ಮೇಲೆ ಕೋಪಗೊಂಡಿಲ್ಲ

ನವದೆಹಲಿ: ಇಂದು ಕ್ರಿಕೆಟ್ ಜಗತ್ತು ಕಂಡ ಅತ್ಯುತ್ತಮ ಆಟಗಾರ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹುಟ್ಟುಹಬ್ಬ. ತಮ್ಮ 16ನೇ ವಯಸ್ಸಿನಲ್ಲಿ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಸಚಿನ್ ಇಂದು 47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ.

ಸಚಿನ್ ಅವರು ಮೈದಾನದಲ್ಲಿ ಎಂದೂ ಕೋಪ ಮಾಡಿಕೊಂಡವರಲ್ಲ. ಎದುರಾಳಿ ಬೌಲರ್ ಎಷ್ಟೇ ಕೆರಳಿಸಿದರೂ ಸಚಿನ್ ಮಾತ್ರ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡುತ್ತಿದ್ದರು. ಇದರ ಜೊತೆಗೆ ಅವರ ಅಭಿಮಾನಿಗಳ ಮೇಲೂ ಕೂಡ ಅವರು ಎಂದು ಕೂಡ ಕೋಪ ಮಾಡಿಕೊಂಡವರಲ್ಲ ಎಂದು ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಸಚಿನ್ ಬಗ್ಗೆ ಮಾತನಾಡಿರುವ ಸೆಹ್ವಾಗ್, ಸಚಿನ್ ಅವರು ಎಂದೂ ಅವರ ಅಭಿಮಾನಿಗಳ ಮೇಲೆ ಕೋಪ ಮಾಡಿಕೊಂಡಿಲ್ಲ. ಅವರ ಬಳಿ ಸಾವಿರಾರು ಜನರು ಆಟೋಗ್ರಾಫ್ ತೆಗೆದುಕೊಳ್ಳಲು ಬರುತ್ತಿದ್ದರು. ಎಷ್ಟೇ ಅಭಿಮಾನಿಗಳು ಬಂದರೂ ಸಚಿನ್ ಅಷ್ಟೇ ತಾಳ್ಮೆಯಿಂದ ಆಟೋಗ್ರಾಫ್ ನೀಡುತ್ತಿದ್ದರು. ಫೋಟೋ ತೆಗೆಸಿಕೊಳ್ಳುತ್ತಿದ್ದರು ಎಂದು ಸೆಹ್ವಾಗ್ ಅವರು ಸಚಿನ್ ಅವರ ಸ್ವಭಾವದ ಬಗ್ಗೆ ತಿಳಿಸಿದ್ದಾರೆ.

ಇದೇ ವೇಳೆ ಸಚಿನ್ ಅವರ ಮಾನವೀಯತೆಯ ಬಗ್ಗೆ ಮಾತನಾಡಿರುವ ಸೆಹ್ವಾಗ್, 2003 ವಿಶ್ವಕಪ್ ಸಮಯದಲ್ಲಿ ನಾವು ಎಲ್ಲರೂ ಸೌತ್ ಆಫ್ರಿಕಾಗೆ ಹೋಗಿದ್ದೆವು. ಈ ವೇಳೆ ಒಂದು ಪಂದ್ಯವನ್ನು ಆಡಲು ನಾವು ಡರ್ಬನ್‍ಗೆ ಹೋಗಲು ರೆಡಿಯಾಗಿದ್ದೆವು. ಆಗ ನಮ್ಮನ್ನು ಟೈಟ್ ಸೆಕ್ಯೂರಿಟಿಯೊಂದಿಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದರು. ಈ ವೇಳೆ ಅಲ್ಲಿ ವ್ಹೀಲ್ ಚೇರ್ ಮೇಲೆ ಅಂಗವಿಕಲ ಮಗುವೊಂದು ಕುಳಿತಿತ್ತು. ನಾವು ಯಾರೂ ಆ ಮಗುವನ್ನು ಗಮನಿಸದೆ ಒಳಗೆ ಹೋದೆವು. ಆದರೆ ಸಚಿನ್ ಮಾತ್ರ ತಾವೇ ಆ ಮಗು ಬಳಿ ಹೋಗಿ ಆಟೋಗ್ರಾಫ್ ನೀಡಿ ಫೋಟೋ ತೆಗೆಸಿಕೊಂಡು ಬಂದಿದ್ದರು ಎಂದು ಹಳೆಯ ಘಟನೆಯೊಂದನ್ನು ಮೆಲುಕು ಹಾಕಿದರು.

ಸಚಿನ್ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡಿ ವಿಶ್ ಮಾಡಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ತಮಗೆ ಕ್ರಿಕೆಟ್ ಮೇಲಿರುವ ಫ್ಯಾಶನ್ ಮೂಲಕ ಹಲವರಿಗೆ ಸ್ಫೂರ್ತಿಯಾಗಿರುವ ಸಚಿನ್ ಅವರಿಗೆ ಹುಟ್ಟುಹಬ್ಬದ ಶುಭಾಶಗಳು. ಮುಂದಿನ ನಿಮ್ಮ ದಿನಗಳು ಅದ್ಭುತವಾಗಿ ಇರಲಿ ಎಂದು ಟ್ವೀಟ್ ಮಾಡಿದ್ದಾರೆ. ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಕೂಡ ವಿಶ್ ಮಾಡಿದ್ದು, ಕ್ರೀಡೆಯಲ್ಲಿ ನೀವು ಬಿಟ್ಟುಹೋದ ಪರಂಪರೆ ಅಮರವಾದದ್ದು, ಹ್ಯಾಪಿ ಬರ್ತ್ ಡೇ ಚಾಂಪ್ ಎಂದು ಟ್ವೀಟ್ ಮಾಡಿದ್ದಾರೆ.

https://twitter.com/YUVSTRONG12/status/1253541747235274752

ಈ ವಿಚಾರವಾಗಿ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಕೂಡ ಟ್ವೀಟ್ ಮಾಡಿದ್ದು, ಬ್ಯಾಟ್ ಮತ್ತು ಹಾರ್ಟ್‍ನಲ್ಲಿ ವಿಶೇಷ ಸ್ಥಾನವೊಂದಿರುವ ಲೆಜೆಂಡ್‍ಗೆ ಹುಟ್ಟುಹಬ್ಬದ ಶುಭಶಯಗಳು. ನಿಮ್ಮ ದಾಖಲೆಯಂತೆ ನಿಮ್ಮ ಜೀವನ ಕೂಡ ಬೆಳಗಲಿ. ನಿಮ್ಮ ಉದಾತ್ತ ಕಾರ್ಯಗಳಿಂದ ಇನ್ನೂ ಹಲವರು ಸ್ಫೂರ್ತಿಗೊಳ್ಳಲಿ ಎಂದು ಬರೆದುಕೊಂಡಿದ್ದಾರೆ. ಆಟದ ರೀತಿಯನ್ನೇ ಬದಲಿಸಿ ಕ್ರಿಕೆಟ್ ಅನ್ನು ಅನೇಕರು ಪ್ರೀತಿಸುವಂತೆ ಮಾಡಿದ ವ್ಯಕ್ತಿ. ಒಳ್ಳೆಯ ವ್ಯಕ್ತಿತ್ವವಿರುವ ಲೆಜೆಂಡ್‍ಗೆ ಹ್ಯಾಪಿ ಬರ್ತೆ ಡೇ ಎಂದು ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.

ಸಚಿನ್ ಅವರ ಹುಟ್ಟುಹಬ್ಬಕ್ಕೆ ಐಸಿಸಿ ಸೇರಿದಂತೆ ಬಿಸಿಸಿಐ ಕೂಡ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದು, ಭಾರತದ ಓಟಗಾರ್ತಿ ಹಿಮಾದಾಸ್ ಕೂಡ ಸಚಿನ್ ಅವರಿಗೆ ವಿಶ್ ಮಾಡಿದ್ದಾರೆ. ಉಳಿದಂತೆ ಮಾಜಿ ಆಟಗಾರರಾದ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎಲ್ಲರೂ ಟ್ವೀಟ್ ಮಾಡಿದ್ದಾರೆ.

https://twitter.com/BCCI/status/1253390714924195841

Comments

Leave a Reply

Your email address will not be published. Required fields are marked *