ಸ್ಕಿಡ್ ಆದ ಎಸ್‍ಯುವಿ ಕಾರು- ನಾಲ್ವರು ಟೆಕ್ಕಿಗಳ ದುರ್ಮರಣ

ನೋಯ್ಡಾ: ಎಸ್‍ಯುವಿ ಕಾರು ಸ್ಕಿಡ್ ಆಗಿ ರಸ್ತೆಯ ಪಕ್ಕದಲ್ಲಿದ್ದ 30 ಅಡಿ ಹಳ್ಳಕ್ಕೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಸೇರಿ ನಾಲ್ಕು ಮಂದಿ ಟೆಕ್ಕಿಗಳು ಸಾವನ್ನಪ್ಪಿರುವ ಘಟನೆ ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್ ಪ್ರೆಸ್ ಹೈವೇಯಲ್ಲಿ ನಡೆದಿದೆ.

ಸಾವನ್ನಪ್ಪಿದ ಎಲ್ಲರೂ ಮಾಹಿತಿ ತಂತ್ರಜ್ಞಾನ ಕಂಪನಿಯ ನೌಕರರು ಎಂದು ತಿಳಿದು ಬಂದಿದ್ದು, ತನ್ನ ಸಹೋದ್ಯೋಗಿಯೊಬ್ಬರು ಕೊಂಡ ಹೊಸ ಎಸ್‍ಯುವಿ ಕಾರಿನಲ್ಲಿ ಟ್ರಿಪ್ ಹೋಗಿದ್ದರು. ಒಟ್ಟು 6 ಮಂದಿ ಪುರುಷರು ಮತ್ತು 3 ಮಂದಿ ಮಹಿಳೆಯರು ಸೇರಿ 9 ಮಂದಿಯಿದ್ದ ಕಾರು ಅಳಕ್ಕೆ ಬಿದ್ದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಎಸ್‍ಯುವಿಯಲ್ಲಿ ವೇಗವಾಗಿ ಬಂದು ಪಾರಿ ಚೌಕ್ ಬಳಿ ಯೂ-ಟರ್ನ್ ತೆಗೆದುಕೊಳ್ಳಲು ಹೋದಾಗ ಸ್ಕಿಡ್ ಆಗಿ ಹಳ್ಳಕ್ಕೆ ಬಿದ್ದಿದೆ. ವೇಗವಾಗಿ ಬಂದು ಯೂ-ಟರ್ನ್ ತೆಗೆದುಕೊಂಡ ಕಾರಣ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ ಎಂದು ಗ್ರೇಟರ್ ನೋಯ್ಡಾದ ಪೊಲೀಸ್ ಅಧಿಕಾರಿ ತನು ಉಪಾಧ್ಯಾಯ ಹೇಳಿದ್ದಾರೆ.

ಈ ಎಲ್ಲಾ ಉದ್ಯೋಗಿಗಳು ನೋಯ್ಡಾ ಸೆಕ್ಟರ್-2 ಅಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರಾಗಿದ್ದಾರೆ. ಹೊಸ ಕಾರು ತೆಗೆದುಕೊಂಡು ಅಲಿಗ್ರಾ ಎಂಬ ಸ್ಥಳಕ್ಕೆ ಹೋಗಿದ್ದಾರೆ. ಅಲ್ಲಿಂದ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಐದು ಮಂದಿಯ ಪೈಕಿ ಮೂವರು ಗಂಭೀರ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

165 ಕಿ.ಮೀ ಉದ್ದ ಇರುವ ಯಮುನಾ ಎಕ್ಸ್ ಪ್ರೆಸ್ ವೇ 2012ರಲ್ಲಿ ಸಂಚಾರಕ್ಕೆ ಮುಕ್ತವಾಗಿದೆ. 2012 ರಿಂದ ಇಲ್ಲಿಯವರೆಗೂ ಸುಮಾರು 5,000 ಅಪಘಾತಗಳಲ್ಲಿ 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 7,600ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *