ನಿಮ್ಮ ನಾಯಕತ್ವವು ಕೂಡ ತುಂಬಾ ಸ್ಫೋಟಕವಾಗಿದೆ ಮೋದಿಜೀ- ಪೀಟರ್ಸನ್

ನವದೆಹಲಿ: ವಿಶ್ವದ ಎಲ್ಲೆಡೆ ಹರಡುತ್ತಿರುವ ಕೊರೊನಾ ವೈರಸ್ ವಿರುದ್ಧ ಹೋರಾಡಲು ಇಂಗ್ಲೆಂಡ್ ಮಾಜಿ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಕೇವಿನ್ ಪೀಟರ್ಸನ್ ಹಿಂದಿಯಲ್ಲಿ ಟ್ವೀಟ್ ಮಾಡಿ ಕರೆಕೊಟ್ಟಿದ್ದು, ಇದಕ್ಕೆ ಪ್ರಧಾನಿ ಮೋದಿ ಅವರು ಫಿದಾ ಆಗಿದ್ದಾರೆ.

ಕೊರೊನಾ ವೈರಸ್ ಮಹಾಮಾರಿ ವಿಶ್ವದಾದ್ಯಂತ ತನ್ನ ಅರ್ಭಟವನ್ನು ಶುರು ಮಾಡಿದೆ. ಕೊರೊನಾ ಪರಿಣಾಮದಿಂದ ಜಗತ್ತಿನ ಬಹುತೇಕ ಚುಟುವಟಿಕೆಗಳು ಸ್ತಬ್ಧವಾಗಿವೆ. ಕ್ರಿಕೆಟ್ ಕೂಡ 60 ವರ್ಷದ ನಂತರ ತನ್ನ ಎಲ್ಲ ಚುಟುವಟಿಕೆಯನ್ನು ನಿಲ್ಲಿಸಿದೆ. ಇದರ ಮಧ್ಯೆ ಕ್ರಿಕೆಟಿಗರು ಮನೆಯಲ್ಲೇ ತಮ್ಮನ್ನು ತಾವೇ ಪ್ರತ್ಯೇಕವಾಗಿದ್ದು ಕೊರೊನಾ ವಿರುದ್ಧ ಹೋರಾಡಲು ಸಿದ್ಧವಾಗಿ ಎಂದು ಸಂದೇಶ ರವಾನಿಸುತ್ತಿದ್ದಾರೆ.

https://twitter.com/KP24/status/1240903502345486336

ಈ ವಿಚಾರವಾಗಿ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೇವಿನ್ ಪೀಟರ್ಸನ್ ಹಿಂದಿಯಲ್ಲಿ ಒಂದು ಟ್ವೀಟ್ ಮಾಡಿದ್ದು, ಭಾರೀ ವೈರಲ್ ಆಗಿದೆ. ನಮಸ್ಕಾರ ಭಾರತ, ನಾವು ಕೊರೊನಾ ವೈರಸ್ ಅನ್ನು ಹೋಗಾಲಾಡಿಸಲು ಒಂದಾಗಬೇಕಿದೆ. ನಾವು ನಮ್ಮ ನಮ್ಮ ಸರ್ಕಾರ ನೀಡುವ ಆದೇಶದಂತೆ ಸ್ವಲ್ಪ ದಿನಗಳ ಕಾಲ ಮನೆಯಲ್ಲೇ ಇರಬೇಕು. ನಾವೂ ಜಾಗರೂಕತೆಯಿಂದ ಇರಬೇಕಾದ ಸಮಯವಿದು ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

ಕೇವಿನ್ ಪೀಟರ್ಸನ್ ಅವರು ಬೇರೆ ದೇಶದವರು ಅದರೂ ನಮ್ಮ ದೇಶದ ಮೇಲಿನ ಕಾಳಜಿಯಿಂದ ಹಿಂದಿಯಲ್ಲಿ ಟ್ವೀಟ್ ಮಾಡಿದ್ದನ್ನು ನೋಡಿ ಖುಷಿಯಾದ ಮೋದಿ ಅವರು, ಪೀಟರ್ಸನ್ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ. ಹಲವು ಬಿಕ್ಕಟ್ಟುಗಳ ಸಮಯದಲ್ಲಿ ತಮ್ಮ ತಂಡವನ್ನು ನೋಡಿದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ನಮಗಾಗಿ ಏನನ್ನೋ ಹೇಳುತ್ತಿದ್ದಾರೆ ಕೇಳಿ ಎಂದು ಬರೆದು, ನಾವೂ ಕೂಡ ಕೊರೊನಾ ವೈರಸ್ ವಿರುದ್ಧ ಹೋರಾಡಲು ಒಗ್ಗೂಡುತ್ತೇವೆ ಎಂದು ಹೇಳಿದ್ದಾರೆ.

https://twitter.com/KP24/status/1240989666733707266

ಮೋದಿ ಅವರು ಟ್ವೀಟ್‍ಗೆ ಮತ್ತೆ ರೀಟ್ವೀಟ್ ಮಾಡಿರುವ ಕೇವಿನ್ ಪೀಟರ್ಸನ್ ಅವರು, ಧನ್ಯವಾದಗಳು ಮೋದಿ ಜೀ, ನಿಮ್ಮ ನಾಯಕತ್ವ ಕೂಡ ಬಹಳ ಸ್ಫೋಟಕವಾಗಿದೆ ಎಂದು ಬರೆದುಕೊಂಡಿದ್ದಾರೆ. ಕೊರೊನಾ ವಿರುದ್ಧ ಹೋರಾಡುವಂತೆ ಮತ್ತು ಸರ್ಕಾರದ ಸೂಚನೆಯಂತೆ ನಡೆಯುವಂತೆ ಎಲ್ಲಾ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಕರೆಕೊಡುತ್ತಿದ್ದಾರೆ.

ಶನಿವಾರ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಕೂಡ ವಿಡಿಯೋ ಮಾಡಿ ಸಂದೇಶ ನೀಡಿದ್ದರು. ಈಗ ನಾವೆಲ್ಲ ಬಹಳ ಕಠಿಣ ಪರಿಸ್ಥಿತಿಯಲ್ಲಿ ಇದ್ದೇವೆ. ನಾವೆಲ್ಲ ಸೇರಿ ಕೊರೊನಾ ವೈರಸ್ ಅನ್ನು ತಡೆಹಿಡಿಯಬೇಕಿದೆ. ನಾವು ನಮ್ಮ ಸುರಕ್ಷತೆಗಾಗಿ ಮನೆಯಲ್ಲೇ ಇದ್ದೇವೆ. ಹಾಗೇ ನೀವು ಕೂಡ ನಿಮ್ಮ ಸುರಕ್ಷತೆಗೆ ಮನೆಯಲ್ಲೇ ಇರಿ. ನಾವೆಲ್ಲರೂ ಸೇರಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟಬೇಕು. ನಾವಾಗಿಯೇ ಐಸೋಲೇಷನ್‍ನಲ್ಲಿ ಇರೋಣ ಎಂದು ವಿರುಷ್ಕಾ ಜೋಡಿ ಮನವಿ ಮಾಡಿಕೊಂಡಿದ್ದರು.

ಕೊರೊನಾ ವೈರಸ್ ವಿರುದ್ಧ ಹೋರಾಡಲು ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ನಿಯಮಗಳನ್ನು ಮಾಡುತ್ತಿದೆ. ಈ ವಿಚಾರವಾಗಿ ಶುಕ್ರವಾರ ಮಾತನಾಡಿದ್ದ ಮೋದಿ ಅವರು ಮಾರ್ಚ್ 22 ರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಯಾರೂ ಹೊರಗಡೆ ಬರಬೇಡಿ. ಜನರೇ ಜನರಿಗಾಗಿ ಮಾಡುವ ಕರ್ಫ್ಯೂ ಇದಾಗಿದ್ದು, ನಾವು ಆರೋಗ್ಯವಾಗಿದ್ದರೆ ದೇಶ ಆರೋಗ್ಯದಲ್ಲಿರುತ್ತದೆ ಎಂದು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *