ವೃದ್ಧ ಅತ್ತೆ-ಮಾವನ ಕತ್ತು ಹಿಸುಕಿ, ಮುಖವನ್ನು ಚಾಕುವಿನಿಂದ ಕಟ್ ಮಾಡಿದ ಸೊಸೆ

– ಮಗನೂ ಭಾಗಿಯಾಗಿರುವ ಶಂಕೆ

ನವದೆಹಲಿ: ಲಾಕ್‍ಡೌನ್ ವೇಳೆ ಮನೆಯಲ್ಲಿ ಇದ್ದ ಅತ್ತೆ-ಮಾವನನ್ನು ಸೊಸೆಯೋರ್ವಳು ಕತ್ತು ಹಿಸುಕಿ ಮುಖವನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿರುವ ಘಟನೆ ಪಶ್ಚಿಮ ದೆಹಲಿಯ ಚಾವ್ಲಾ ಪ್ರದೇಶದಲ್ಲಿ ನಡೆದಿದೆ.

ಕೊಲೆಯಾದ ವೃದ್ಧ ಅತ್ತೆ-ಮಾವನನ್ನು ರಾಜ್ ಸಿಂಗ್ (61), ಓಂವತಿ (58) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಸೊಸೆಯನ್ನು ಕವಿತಾ ಎಂದು ಗುರುತಿಸಲಾಗಿದೆ. ಇದರಲ್ಲಿ ಕವಿತಾ ಗಂಡ ಸತೀಶ್ ಸಿಂಗ್ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆ ನಡೆದಾಗ ಕವಿತಾ, ಸತೀಶ್ ಮತ್ತು ಅವರ 6 ವರ್ಷ ಹಾಗೂ 8 ವರ್ಷದ ಇಬ್ಬರು ಮಕ್ಕಳು ಮನೆಯಲ್ಲೇ ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ನಮ್ಮ ಪೊಲೀಸ್ ಕಂಟ್ರೋಲ್ ರೂಮ್‍ಗೆ ಕೊಲೆಯ ಬಗ್ಗೆ ಇಂದು ಬೆಳಗ್ಗೆ 11 ಗಂಟೆಗೆ ಕರೆ ಬಂತು. ಆಗ ತಕ್ಷಣ ನಾವು ಸ್ಥಳಕ್ಕೆ ಹೋದೆವು. ಈ ವೇಳೆ ಮನೆಯ ಬೆಡ್ ರೂಮ್ ಒಳಗೆ ವೃದ್ಧ ದಂಪತಿಯ ಮೃತದೇಹಗಳು ಪತ್ತೆಯಾದವು. ಜೊತೆಗೆ ಮೃತದೇಹಗಳ ಮುಖವನ್ನು ಚಾಕುವಿನಿಂದ ಕಟ್ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ನಂತರ ಆಸ್ತಿ ವಿವಾದದ ಕಾರಣದಿಂದ ಈ ಕೊಲೆಗಳು ನಡೆದಿದೆ ಎನ್ನಲಾಗಿದೆ. ಆದರೆ ಈ ಕೊಲೆಯಲ್ಲಿ ಮೃತ ದಂಪತಿಯ ಮಗನ ಪಾತ್ರ ಇದೆ ಎಂಬುದರ ಬಗ್ಗೆ ಸ್ಪಷ್ಟೀಕರಣ ಸಿಕ್ಕಿಲ್ಲ. ಆದರೆ ಕೊಲೆ ನಡೆದಾಗ ಆತನೂ ಮನೆಯಲ್ಲೇ ಇದ್ದ ಕಾರಣ ಅವರ ಮೇಲೆ ಅನುಮಾನ ಬಂದಿದೆ. ಕೊಲೆಯ ನಂತರ ಕುಟುಂಬ ನಾಪತ್ತೆಯಾಗಿದ್ದು, ಈವರೆಗೂ ಯಾರನ್ನೂ ಅರೆಸ್ಟ್ ಮಾಡಿಲ್ಲ. ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *