ಸುರೇಶ್ ಪ್ರಭುಗೆ ಕೊರೊನಾ ಇಲ್ಲ – 1 ತಿಂಗಳು ಬಿಜೆಪಿಯಿಂದ ಪ್ರತಿಭಟನೆ ಇರಲ್ಲ

– ಕೊರೊನಾ ಭೀತಿಯಿಂದ ಇಬ್ಬರು ಬಿಜೆಪಿಗರು ಐಸೋಲೇಶನ್

ನವದೆಹಲಿ: ಒಂದು ತಿಂಗಳು ಭಾರತದದ್ಯಾಂತ ಬಿಜೆಪಿ ಪಕ್ಷ ಯಾವುದೇ ಪ್ರತಿಭಟನೆ ಕೈಗೊಳ್ಳುವುದಿಲ್ಲ ಎಂದು ಭಾರತೀಯ ಜನತಾ ಪಾರ್ಟಿ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ಹೇಳಿದ್ದಾರೆ.

ಭಾರತದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲ ರಾಜ್ಯಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೆಚ್ಚು ಜನ ಒಂದೇ ಕಡೆ ಸೇರದಂತೆ ಜಾತ್ರೆ, ಮಸೀದಿ, ಮಂದಿರಗಳಿಗೂ ನಿಷೇಧ ಹೇರಲಾಗಿದೆ. ಹೀಗಾಗಿ ಯಾವುದೇ ಪರಿಸ್ಥಿತಿಯಲ್ಲೂ ನಾವು ಪ್ರತಿಭಟನೆ ಕೈಗೊಳ್ಳಲ್ಲ ಎಂದು ಜೆಪಿ ನಡ್ಡಾ ಅವರು ಇಂದು ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.

ಮಂಗಳವಾರ ಜೆಪಿ ನಡ್ಡಾ ಅವರು, ಪ್ರಧಾನಿ ಮೋದಿ ಅವರ ಜೊತೆ ಪಕ್ಷದ ಸಂಸದೀಯ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಬಗ್ಗೆ ಮಹತ್ವದ ಚೆರ್ಚೆ ನಡೆಸಲಾಗಿತ್ತು. ಜೊತೆಗೆ ಬಿಜೆಪಿಗರು ಕೊರೊನಾ ವೈರಸ್ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಜೊತೆಗೆ ಏಪ್ರಿಲ್ 15ರವರೆಗೂ ಸಮೂಹಿಕ ಸಭೆಗಳು ಸೇರದಂತೆ ಸೂಚಿಸಲಾಗಿತ್ತು. ಹೀಗಾಗಿ ನಡ್ಡಾ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ಇದರ ನಡುವೆ ಸೌದಿ ಅರೇಬಿಯಾಗೆ ಹೋಗಿ ಬಂದಿದ್ದ ಬಿಜೆಪಿ ಸಂಸದ ಸರೇಶ್ ಪ್ರಭು ಅವರಿಗೆ ಕೊರೊನಾ ಸೋಂಕು ಇದೆ ಎಂದು ಶಂಕಿಸಲಾಗಿತ್ತು. ಆದರೆ ಅವರನ್ನು ಪರೀಕ್ಷೆ ಮಾಡಿದಾಗ ಅವರಲ್ಲಿ ರೋಗದ ಲಕ್ಷಣ ಕಾಣಿಸಿಕೊಂಡಿರಲಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಸುರೇಶ್ ಪ್ರಭು ಅವರು ತಮ್ಮ ಮನೆಯಲ್ಲೇ 14 ದಿನ ಪ್ರತ್ಯೇಕವಾಗಿರುವುದಾಗಿ ತಿಳಿಸಿದ್ದಾರೆ.

ಸುರೇಶ್ ಪ್ರಭು ಅವರು ಕಳೆದ ವಾರ ನಡೆದ ಶೆರ್ಪಾಸ್ ಸಭೆಯಲ್ಲಿ ಪಾಲ್ಗೊಳ್ಳಲು ಸೌದಿ ಅರೇಬಿಯಾಗೆ ಹೋಗಿದ್ದರು. ಸೌದಿ ಅರೇಬಿಯಾದಲ್ಲೂ ಸ್ವಲ್ಪ ಪ್ರಮಾಣದಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಇಲ್ಲಿಯವರಿಗೂ 171 ಕೇಸ್‍ಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ 14 ದಿನಗಳ ಕಾಲ ನಿಗಾ ವಹಿಸಲಾಗಿದೆ. ಇದರಿಂದ ಅವರು ಮುಂದೆ ನಡೆಯುವ ಸಂಸತ್ತಿನ ಅಧಿವೇಶದಲ್ಲಿ ಭಾಗಿಯಾಗಲ್ಲ ಎಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ ಮುರಳೀಧರನ್ ಅವರೂ ಕೂಡ ತಮ್ಮ ನಿವಾಸದಲ್ಲೇ ಐಸೋಲೇಷನ್ ವಾರ್ಡಿಗೆ ಶಿಫ್ಟ್ ಆಗಿದ್ದಾರೆ. ಇವರಿಗೂ ಕೂಡ ಪರೀಕ್ಷೆ ಮಾಡಿದಾಗ ಸೋಂಕಿನ ಯಾವುದೇ ಲಕ್ಷಣ ಕಂಡುಬಂದಿಲ್ಲ. ಆದರೂ ಮುಂಜಾಗ್ರತ ಕ್ರಮವಾಗಿ ಮುರಳೀಧರನ್ ಮನೆಯಲ್ಲಿ ನಿಗಾದಲ್ಲಿದ್ದಾರೆ.

ಇತ್ತೀಚೆಗೆ ಕೇರಳದ ಶ್ರೀ ಚಿತ್ರ ತಿರುನಾಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ಟೆಕ್ನಾಲಜಿ (ಎಸ್‍ಸಿಟಿಐಎಂಎಸ್‍ಟಿ) ಕಾಲೇಜಿನ ಡಾಕ್ಟರ್‍ವೊಬ್ಬರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಈ ಕಾಲೇಜಿಗೆ ಮುರಳೀಧರನ್ ಕೂಡ ಮಾರ್ಚ್ 14ರಂದು ತೆರೆಳಿದ್ದರು. ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು.

Comments

Leave a Reply

Your email address will not be published. Required fields are marked *