ಕೊಹ್ಲಿ, ಸಚಿನ್, ಗಂಗೂಲಿ ಸೇರಿದಂತೆ 40 ಕ್ರೀಡಾಪಟುಗಳ ಜೊತೆ ಮೋದಿ ಸಭೆ

– ಕ್ರೀಡಾಪಟುಗಳ ಕೆಲಸವನ್ನು ಹಾಡಿಹೊಗಳಿದ ಪಿಎಂ

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೇರಿದಂತೆ ಸುಮಾರು 40 ಜನ ಕ್ರೀಡಾಪುಟಗಳ ಜೊತೆ ಪ್ರಧಾನಿ ಮೋದಿ ಅವರು ಇಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.

ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಮಾರ್ಚ್ 24ರಂದು 21 ದಿನಗಳ ಲಾಕ್‍ಡೌನ್ ಜಾರಿಗೊಳಿಸಿದ ನಂತರ ಮೋದಿ ಅವರು ಕ್ರೀಡಾಪಟುಗಳ ಜೊತೆ ಇದೇ ಮೊದಲ ಬಾರಿಗೆ ಸಂವಹನ ನಡೆಸಿದ್ದಾರೆ. ಈ ಸಭೆಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ದೇಶದ ಪರಿಸ್ಥಿತಿ ಮತ್ತು ಲಾಕ್‍ಡೌನ್‍ನಿಂದ ಆಗಿರುವ ಪರಿಣಾಮಗಳ ಬಗ್ಗೆ ಕ್ರೀಡಾಪಟುಗಳ ಜೊತೆ ಚರ್ಚೆ ಮಾಡಿದ್ದಾರೆ.

ಈ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಕೊಹ್ಲಿ, ಸಚಿನ್ ಮತ್ತು ಗಂಗೂಲಿಯವರ ಜೊತೆ, ಓಟಾಗಾರ್ತಿ ಪಿಟಿ ಉಷಾ, ಬ್ಯಾಡ್ಮಿಂಟನ್ ಆಟಗಾರ ಪುಲ್ಲೇಲಾ ಗೋಪಿಚಂದ್, ಚೆಸ್ ಆಟಗಾರ ವಿಶ್ವನಾಥನ್ ಆನಂದ್, ರನ್ನರ್ ಹಿಮಾ ದಾಸ್, ಕುಸ್ತಿಪಟು ಭಜರಂಗ್ ಪುನಿಯಾ, ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು, ಕ್ರಿಕೆಟಿಗರಾದ ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮತ್ತು ಚೇತೇಶ್ವರ ಪೂಜಾರ ಇತರ ಪ್ರಮುಖ ಕ್ರೀಡಾಪಟುಗಳು ಇದ್ದರು.

ಈ ಸಮಯದಲ್ಲಿ ಕ್ರೀಡಾಪಡುಗಳು ರಾಷ್ಟ್ರಕ್ಕಾಗಿ ಮೈದಾನದಲ್ಲಿ ಪಡುವ ಕಷ್ಟವನ್ನು ಮೋದಿ ಅವರು ಶ್ಲಾಘಿಸಿದ್ದಾರೆ. ಇದರ ಜೊತೆಗೆ ಕ್ರೀಡಾಪಟುಗಳು ಈಗ ದೇಶದಲ್ಲಿ ಜನರಲ್ಲಿ ಸಾಮಾಜಿಕ ಅಂತರದ ಬಗ್ಗೆ ಮತ್ತು ಈಗಿನ ಪರಿಸ್ಥಿತಿಯ ಬಗ್ಗೆ ತಿಳಿ ಹೇಳುವ ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಲಾಕ್‍ಡೌನ್ ಸಮಯದಲ್ಲಿ ಸರ್ಕಾರ ಮಾಡಿರುವ ನಿಯಮಗಳನ್ನು ಜನರು ಪಾಲಿಸುವಂತೆ ಮಾಡಬೇಕು ಎಂದು ಕ್ರೀಡಾಪಟುಗಳಿಗೆ ಕೇಳಿಕೊಂಡಿದ್ದಾರೆ.

ಕೊರೊನಾ ವೈರಸ್ ನಿಂದ ಉಂಟಾಗುವ ಪರಿಸ್ಥಿತಿಯ ಬಗ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕ್ರೀಡಾಪಟುಗಳೊಂದಿಗೆ ಸಂವಹನ ನಡೆಸಿ ನಂತರ ಟ್ವೀಟ್ ಮಾಡಿರುವ ಮೋದಿ ಅವರು, ಕ್ರೀಡೆಗಳಲ್ಲಿ ಸ್ವಯಂ-ಶಿಸ್ತು, ಸ್ಥಿರತೆ, ತಂಡದ ಕೆಲಸ ಮತ್ತು ಹೋರಾಟದ ಮನೋಭಾವ ಬೇಕು. ಹಾಗೇಯೆ ಕೊರೊನಾ ವೈರಸ್ ಅನ್ನು ಸೋಲಿಸಲು ಇವುಗಳ ಅಗತ್ಯ ನಮಗಿದೆ ಎಂದಿದ್ದಾರೆ.

ಇದರ ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಮೋದಿ, ಫಿಟ್‍ನೆಸ್‍ನ ಮಹತ್ವವನ್ನು ಸಾರುವ ವಿಡಿಯೋಗಳನ್ನು ಹಂಚಿಕೊಳ್ಳುವುದರಿಂದ, ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವುದರಿಂದ, ಸಾಮಾಜಿಕ ಅಂತರಕ್ಕೆ ಒತ್ತು ನೀಡಿ ಜೊತೆಗೆ ಪಿಎಂ ಕೇರ್ಸ್ ನಂತಹ ಪ್ರಯತ್ನಗಳಿಗೆ ಸಹಕರಿಸಿ ನಮ್ಮ ಕ್ರೀಡಾಪಟುಗಳು ಭಾರತವನ್ನು ಕೊರೊನಾದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *