ಕರಾವಳಿಯಲ್ಲಿ ಹೊಸ ವಿವಾದಕ್ಕೆ ಕಾರಣವಾಯ್ತು ಅನಂತ್ ಕುಮಾರ್ ಹೆಗಡೆ ಭಾಷಣ!

ಉಡುಪಿ: ರಾಜ್ಯ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ನಾಯಕರೊಬ್ಬರ ಭಾಷಣ ಈಗ ವಿವಾದವಾಗಿದ್ದು, ಕರಾವಳಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನಲ್ಲಿ ಬುಧವಾರ ಪರಿವರ್ತನಾ ಸಮಾವೇಶ ನಡೆದಿತ್ತು. ಈ ಸಂದರ್ಭದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆ ಭಾಷಣ ಮಾಡಿದ್ದರು. ಜನರ ಚಪ್ಪಾಳೆ ಮತ್ತು ಶಿಳ್ಳೆಯ ನಡುವೆ ಬಹಳ ಉದ್ವೇಗದಿಂದ ಮಾತನಾಡಿದ ಅನಂತಕುಮಾರ್ ಹೆಗಡೆ, ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಭಾಷಣ ಮಾಡುವ ಸಂದರ್ಭದಲ್ಲಿ ಒಂದು ಕಡೆಯಲ್ಲಿ “ಪೂಜಾರಿಯ ಪುಂಗಿ ಬಂದ್ ಆಗಬೇಕು” ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಸಭಿಕರಿಂದ ಸಾಕಷ್ಟು ಶಿಳ್ಳೆ ಚಪ್ಪಾಳೆ ಹೆಗಡೆಯ ಮಾತಿಗೆ ಲಭ್ಯವಾಗಿತ್ತು. ಇದಾಗಿ ಎರಡು ದಿನಗಳ ನಂತರ ವಿವಾದ ಆರಂಭವಾಗಿದೆ.

ಪೂಜಾರಿಯ ಪುಂಗಿ ಬಂದ್ ಆಗಬೇಕು ಅನ್ನೋದನ್ನು ಒತ್ತಿ ಹೇಳುವ ವಿಡಿಯೋ ತುಣುಕು ವಾಟ್ಸಪ್, ಫೇಸ್ ಬುಕ್ ಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದು ಕೇವಲ ಶಾಸಕ ಗೋಪಾಲ ಪೂಜಾರಿಗೆ ಮಾಡಿದ ಅವಮಾನ ಅಲ್ಲ ಕರಾವಳಿಯ ಬಿಲ್ಲವ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಬಿಲ್ಲವ ಮುಖಂಡರು ಪರಿಗಣಿಸಿದ್ದಾರೆ. ಕೆಲ ವಾಟ್ಸಪ್ ಗ್ರೂಪಲ್ಲಿ ಇದು ಜನಾರ್ದನ ಪೂಜಾರಿಗಾದ ಅವಮಾನ ಅಂತ ದೂರುತ್ತಿದ್ದಾರೆ. ಅನಂತ ಕುಮಾರ್ ಹೆಗಡೆ ಮತ್ತು ಬಿಜೆಪಿಯ ಪರಿವರ್ತನಾ ರ್ಯಾಲಿಯ ಬಗ್ಗೆ ಬಿಲ್ಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರಾವಳಿ ಜಿಲ್ಲೆಯಲ್ಲಿ ಬಿಜೆಪಿಗೆ ಬಿಲ್ಲವ ಮತಗಳು ನಿರ್ಣಾಯಕ. ಗೆಲ್ಲಲು ಪೂಜಾರಿಗಳ ಮತಗಳು ಅನಿವಾರ್ಯ. ಇದೇ ಈ ವಿಡಿಯೋ ತುಣುಕು ವೈರಲ್ ಗೆ ಕಾರಣ. ಸಚಿವ ಅನಂತ್ ಕುಮಾರ್ ಹೆಗಡೆ ಅವರ ಬಿಲ್ಲವರ ಕ್ಷಮೆಯನ್ನು ಕೋರಬೇಕು ಎಂಬ ವಾದಗಳು ಕೂಡ ಆರಂಭವಾಗಿದೆ.

 

Comments

Leave a Reply

Your email address will not be published. Required fields are marked *