ನೂತನ ಗ್ರಾಮ ಪಂಚಾಯತಿ ಕಾರ್ಯಾಲಯ ನಿರ್ಮಾಣಕ್ಕೆ ಪರ, ವಿರೋಧ- ಜೆಸಿಬಿ ಯಂತ್ರಕ್ಕೆ ಅಡ್ಡಲಾಗಿ ಕುಳಿತ ಗ್ರಾಮಸ್ಥರು

ನೆಲಮಂಗಲ: ಸಾಕಷ್ಟು ವಿವಾದಕ್ಕೆ ಕಾರಣವಾಗಿ ಏಕಾಏಕಿ ಊರ ಹೊರಗೆ ಗ್ರಾಮ ಪಂಚಾಯತಿ ಕಾರ್ಯಾಲಯದ ನಿರ್ಮಾಣಕ್ಕೆ ಪರ ವಿರೋಧ ವ್ಯಕ್ತವಾಗಿದ್ದು, ಜೆಸಿಬಿ ಯಂತ್ರಕ್ಕೆ ಅಡ್ಡಲಾಗಿ ಕುಳಿತ ಗ್ರಾಮಸ್ಥ ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಉತ್ತರ ತಾಲೂಕಿನ ಆಲೂರು ಗ್ರಾಮದಲ್ಲಿ ಹೈಡ್ರಾಮಾ ನಡೆದಿದೆ.

ಇಂದು ಕೆಲ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮದ ಹೊರ ಭಾಗದ ಸರ್ಕಾರಿ ಗೋಮಾಳದಲ್ಲಿ ಗುದ್ದಲಿ ಪೂಜೆಗೆ ಮುಂದಾಗಿದ್ದರು. ಇನ್ನೂ ಜನಸಾಮಾನ್ಯರಿಗೆ ಅನಾನುಕೂಲವಾಗುವ ನಿಟ್ಟಿನಲ್ಲಿ ಕೆಲ ಸದಸ್ಯರು ವಿರೋಧ ಕೂಡ ವ್ಯಕ್ತಪಡಿಸಿದ್ದಾರೆ. ಈ ನೂತನ ಪಂಚಾಯತಿ ಕಟ್ಟಡ ನಿರ್ಮಾಣ ಮಾಡಲು ಬೆಂಗಳೂರು ಜಿಲ್ಲಾಧಿಕಾರಿ ಮೊದಲು ಅನುಮತಿ ನೀಡಿದ್ದು, ನಂತರ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನಲೆ ತಡೆಹಿಡಿಯಲಾಗಿದೆ.

ಕೆಲ ಸದಸ್ಯರು ತಮ್ಮ ಸ್ವಾರ್ಥಕ್ಕಾಗಿ ಹಾಗೂ ದಬ್ಬಾಳಿಕೆಯಿಂದ ಈ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅಲ್ಲದೆ ಈ ಪ್ರದೇಶದಲ್ಲಿ ಸಾಕಷ್ಟು ಕಳ್ಳತನ ಸುಲಿಗೆ ಪ್ರಕರಣಗಳು ನಡೆಯುತ್ತಿದೆ. ಮಹಿಳೆಯರು, ವೃದ್ಧರು, ಅಂಗವಿಕಲರು ಪಂಚಾಯತಿಯ ಕೆಲಸದಲ್ಲಿ ತೊಡಗಲು ಅನಾನುಕೂಲವಾಗಿದೆ ಎಂದು ದೂರುದಾರ ಹರೀಶ್ ಆರೋಪಿಸಿದ್ದಾರೆ.

ಈ ವಿಚಾರದಲ್ಲಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಹೀಗಾಗಲೇ ಗ್ರಾಮದಲ್ಲಿ ಇದ್ದ ಹಳೆಯ ಕಟ್ಟಡವನ್ನು ನೆಲಸಮ ಮಾಡಿದ್ದು, ಎಲ್ಲಾ ಗ್ರಾಮಸ್ಥರ ಅನುಕೂಲಕ್ಕಾಗಿ ಒಂದೇ ಸೂರಿನಡಿ ಪಂಚಾಯತಿ ಕಾರ್ಯಾಲಯ, ಅಂಚೆ ಕಚೇರಿ, ಗ್ರಾಮ ಲೆಕ್ಕಾಧಿಕಾರಿ ಕಚೇರಿ, ಗ್ರಂಥಾಲಯ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಆದರೆ ಈ ಯೋಜನೆಗೆ ಉದ್ದೇಶ ಪೂರ್ವಕವಾಗಿ ಕೆಲವರು ತಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮ ಪಂಚಾಯತಿ ಪಿಡಿಒ ರಾಜೇಶ್ ಮಾತನಾಡಿ, ಪಂಚಾಯತಿ ಕಾರ್ಯಾಲಯ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪಂಚಾಯತಿಯ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಈ ನಿವೇಶನದಲ್ಲಿ ಪಂಚಾಯತಿ ಕಟ್ಟಡ ಕಟ್ಟಲು ಮುಂದಾಗಿದ್ದೇವೆ ಎಂದರು. ಒಟ್ಟಾರೆ ಈ ನೂತನ ಪಂಚಾಯತಿ ಕಟ್ಟಡಕ್ಕೆ ಗ್ರಾಮದಲ್ಲಿ ಪರ ವಿರೋಧಕ್ಕೆ ಕಾರಣವಾಗಿದ್ದು ಜನಸಾಮಾನ್ಯರ ಪರದಾಟಕ್ಕೆ ಕಾರಣವಾಗಿದೆ.

Comments

Leave a Reply

Your email address will not be published. Required fields are marked *