ಬೆಂಗಳೂರು: ಕೈ ನಾಯಕ ರಾಹುಲ್ ಗಾಂಧಿ (Rahul Gandhi) ಅನರ್ಹತೆ ವಿಚಾರ ತಿಳಿದು ಶಾಸಕ ನೆಹರೂ ಓಲೆಕಾರ್ ಇಂದು ಹೈಕೋರ್ಟ್ (HighCourt) ಗೆ ಅರ್ಜಿ ಸಲ್ಲಿಸಿದ್ದಾರೆ.
ಹೌದು. ಫೆಬ್ರವರಿ ತಿಂಗಳ 13 ರಂದೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೆಹರೂ ಓಲೆಕಾರ್ (Neharu Olekar) ಗೆ ಎರಡು ವರ್ಷ ಶಿಕ್ಷೆ ವಿಧಿಸಿ ಆದೇಶ ನೀಡಿದರೂ ಸಹ, ಶಿಕ್ಷೆ ವಿಚಾರವನ್ನು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿರಲಿಲ್ಲ. ಯಾವಾಗ ರಾಹುಲ್ ಗಾಂಧಿ ಅನರ್ಹ ವಿಚಾರ ತಿಳಿಯಿತೇ ಇಂದೇ ಹೈಕೋರ್ಟ್‍ಗೆ ಹಾಜರಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ನೆಹರೂ ಓಲೆಕಾರ್ ಅರ್ಜಿ ಸಲ್ಲಿಸಿದ್ರು.
ನೆಹರೂ ಓಲೆಕಾರ್ ಅರ್ಜಿ ಸಲ್ಲಿಕೆ ವಿಚಾರ ತಿಳಿದ ಲೋಕಾಯುಕ್ತ ಸಹ ಆಕ್ಷೇಪಣೆ ಸಲ್ಲಿಸಿತು. ಫೆಬ್ರವರಿ 13 ರಂದು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದೆ. ಈಗಾಗಲೇ ನೆಹರೂ ಓಲೆಕಾರ್ ಅನರ್ಹಗೊಂಡಿದ್ದಾರೆ. ಶಿಕ್ಷೆಗೆ ತಡೆಕೋರಿ ಸಮರ್ಪಕ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ಕೆಳ ನ್ಯಾಯಾಲಯದ ತೀರ್ಪಿಗೆ ತಡೆ ನೀಡದಂತೆ ಲೋಕಾಯುಕ್ತದಿಂದ ಮನವಿ ಮಾಡಲಾಯ್ತು. ಸೂಕ್ತ ಅರ್ಜಿ ಸಲ್ಲಿಸುವಂತೆ ನೆಹರೂ ಓಲೆಕಾರ್ ಪರ ವಕೀಲರಿಗೆ ಸೂಚಿಸಿ ಇವತ್ತಿನ ಅರ್ಜಿಯನ್ನ ಹೈಕೋರ್ಟ್ ಇತ್ಯರ್ಥಗೊಳಿಸಿದೆ. ಇದನ್ನೂ ಓದಿ: ಅಂದು ಸುಗ್ರೀವಾಜ್ಞೆ ಹರಿದು ಎಸೆಯದೇ ಇದ್ದಿದ್ದರೆ ರಾಹುಲ್ ಅನರ್ಹರಾಗುತ್ತಿರಲಿಲ್ಲ!
ಪ್ರಕರಣದ ಹಿನ್ನೆಲೆ: ಬಿಜೆಪಿ ಶಾಸಕ ನೆಹರೂ ಓಲೆಕಾರ್ ಗೆ 2 ವರ್ಷ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಫೆಬ್ರವರಿ 13 ರಂದು ಆದೇಶ ಹೊರಡಿಸಿತ್ತು. ಹಾವೇರಿ ಶಾಸಕರ ವಿರುದ್ಧ ಸ್ವಜನ ಪಕ್ಷಪಾತ ಆರೋಪ ಕೇಳಿ ಬಂದಿದ್ದು, ಇಬ್ಬರು ಪುತ್ರರಿಗೂ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶೆ ಜೆ. ಪ್ರೀತ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಮಾಡಿದ್ದರು. 3 ವರ್ಷಕ್ಕಿಂತ ಕಡಿಮೆ ಶಿಕ್ಷೆಯಾದ ಹಿನ್ನೆಲೆ, ಜನಪ್ರತಿನಿಧಿಗಳ ನ್ಯಾಯಾಲಯದಿಂದಲೇ ಜಾಮೀನು ಮಂಜೂರಾಗಿತ್ತು.



Leave a Reply