ಸದ್ದಿಲ್ಲದೇ ಸಪ್ತಪದಿ ತುಳಿದ ಒಲಿಂಪಿಕ್ಸ್‌ ಪದಕ ವಿಜೇತ ನೀರಜ್ ಚೋಪ್ರಾ

– ಚಿನ್ನದ ಹುಡುಗನ ಕೈ ಹಿಡಿದ ಬೆಡಗಿ ಯಾರು?

ಮುಂಬೈ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಸದ್ದಿಲ್ಲದೇ ವಿವಾಹವಾಗುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನೀರಜ್ ಚೋಪ್ರಾ ತಮ್ಮ ಮದುವೆಯ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ, ಹಿಮಾನಿ ಮೋರ್ ಅವರನ್ನು ವಿವಾಹವಾಗಿದ್ದಾರೆ. ಮದುವೆಯ ಫೋಟೋಗಳನ್ನು ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ಚೋಪ್ರಾ, ʻನನ್ನ ಕುಟುಂಬದೊಂದಿಗೆ ಜೀವನದ ಹೊಸ ಅಧ್ಯಾಯ ಪ್ರಾರಂಭಿಸಿದೆ. ಈ ಕ್ಷಣದಲ್ಲಿ ಪ್ರತಿಯೊಬ್ಬರ ಆಶೀರ್ವಾದಕ್ಕೂ ಕೃತಜ್ಞನಾಗಿದ್ದೇನೆʼ ಅಂತ ಬರೆದುಕೊಂಡಿದ್ದಾರೆ.

ಸದ್ಯ ನೀರಜ್ ಚೋಪ್ರಾ ಹಂಚಿಕೊಂಡಿರುವ ಫೋಟೋದಲ್ಲಿ ಎರಡೂ ಕುಟುಂಬಗಳ ಪ್ರಮುಖರು ಕಾಣಿಸಿಕೊಂಡಿದ್ದಾರೆ. ರಹಸ್ಯ ಸ್ಥಳದಲ್ಲಿ ಖಾಸಗಿಯಾಗಿ ಮದುವೆ ಆಗಿದ್ದಾರೆ.

ಈ ಮಧ್ಯೆ ಮದುವೆ 2 ದಿನಗಳ ಹಿಂದೆಯೇ ನಡೆದಿದೆ. ನವ ದಂಪತಿಗಳು ಹನಿಮೂನ್‌ಗೆ ತೆರಳಿದ್ದಾರೆ. ಎಲ್ಲಿಗೆ ಹೋಗಿದ್ದಾರೆ ಎಂಬುದು ನನಗೂ ತಿಳಿದಿಲ್ಲ ಎಂದು ನೀರಜ್ ಚೋಪ್ರಾ ಚಿಕ್ಕಪ್ಪ ಭೀಮ್ ಪ್ರತಿಕ್ರಿಯಿಸಿರುವುದು ವರದಿಯಾಗಿದೆ.

ನೀರಜ್‌ ಪತ್ನಿ ಯಾರು ಗೊತ್ತೇ?
ನೀರಜ್ ಚೋಪ್ರಾ ಪತ್ನಿ ಹಿಮಾನಿ ಮೋರ್ ಸೋನಿಪತ್ ಮೂಲದವರಾಗಿದ್ದು ಟೆನ್ನಿಸ್‌ ಆಟಗಾರ್ತಿ ಆಗಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಫ್ರಾಂಕ್ಲಿನ್ ಪಿಯರ್ಸ್ ವಿಶ್ವವಿದ್ಯಾಲಯದಲ್ಲಿ ಟೆನ್ನಿಸ್‌ನಲ್ಲಿ ಅರೆಕಾಲಿಕ ಸಹಾಯಕ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ.