ತೋಟದ ಮನೆಗೆ ನುಗ್ಗಿ 40 ಕೆಜಿ ಅಕ್ಕಿ, ಅಡುಗೆ ಸಾಮಗ್ರಿ ಕೊಂಡೊಯ್ದ ನಕ್ಸಲರು!

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ. ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದ ಬ್ರಿಗೇಡಿಯರ್ ಮುತ್ತಣ್ಣ ಎಂಬವರ ತೋಟಕ್ಕೆ ಸೋಮವಾರ ಸಂಜೆ ಆಗಮಿಸಿದ್ದ ಮೂವರು ಶಸ್ತ್ರಧಾರಿ ನಕ್ಸಲರು, ಲೈನ್‍ಮನೆಯಲ್ಲಿ ವಾಸವಿದ್ದ ರಘು ಪೆಮ್ಮಯ್ಯ ಎಂಬವರಿಂದ ದವಸ ಧಾನ್ಯ ಕೊಂಡೊಯ್ದಿದ್ದಾರೆ.

ಬೆಳಗ್ಗೆ 6 ಗಂಟೆ ವೇಳೆಗೆ ಆಗಮಿಸಿದ್ದ ನಕ್ಸಲರು ಆರಂಭದಲ್ಲಿ ಅಲ್ಲಿದ್ದವರ ಜೊತೆ ಮಾತನಾಡಿದ್ದಾರೆ. ಮೂವರ ಪೈಕಿ ನಕ್ಸಲ್ ನಾಯಕ ವಿಕ್ರಂ ಗೌಡ, ಮತ್ತೊಬ್ಬನನ್ನು ಚಂದ್ರು ಎಂದು ಗುರುತಿಸಲಾಗಿದೆ. ಮನೆಗೆ ಭೇಟಿ ನೀಡಿದ ಅವರು ಮನೆಯಲ್ಲಿ ಹಂದಿ ಮಾಂಸ ಹಾಗೂ ಕೋಳಿ ಮಾಂಸದೂಟ ಮಾಡಿ 10 ಗಂಟೆ ಸುಮಾರಿಗೆ ವಾಪಸ್ಸಾಗಿದ್ದಾರೆ. ಈ ವೇಳೆ 40 ಕೆ.ಜಿ ಅಕ್ಕಿ, ಮೆಣಸಿನ ಪುಡಿ, ಬದನೆಕಾಯಿ, ಟೊಮೇಟೋ ಕೇಳಿ ಪಡೆದುಕೊಂಡು ಹೋಗಿದ್ದಾರೆ.

ನಾವು ನಿಮಗಾಗಿ ಬಂದಿರೋದು. ನಾವು ಬಂದಿರುವ ವಿಚಾರವನ್ನು ಪೊಲೀಸರಿಗೆ ಹೇಳಿದ್ರೆ ಸುಮ್ಮನೆ ಬಿಡೋದಿಲ್ಲ ಅಂತ ಎಚ್ಚರಿಸಿ ತೆರಳಿದ್ದಾರೆ. ಹೀಗಾಗಿ ರಘು ಪೆಮ್ಮಯ್ಯ ಭಯದಿಂದ ಯಾರಿಗೂ ಹೇಳಿರಲಿಲ್ಲ. ಮಂಗಳವಾರ ಬೆಳಗ್ಗೆ ತೋಟದ ಮ್ಯಾನೇಜರ್ ಚಂಗಪ್ಪ ಅವರಿಗೆ ವಿಚಾರ ತಿಳಿಸಿ, ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸಂಜೆ 5 ಗಂಟೆ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು 45 ನಿಮಿಷ ಕಾಲ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆ ಹಾಕಿದರು. ಎಎನ್‍ಎಫ್ ತಂಡದವರು ಮನೆ ಸುತ್ತಮುತ್ತ ಪರಿಶೀಲಿಸಿ ವಾಪಸ್ಸಾದರು. ರಾತ್ರಿ ವೇಳೆ ಅಲ್ಲಿ ರಕ್ಷಣೆಗೆ ಯಾರೂ ಇರಲಿಲ್ಲ. ದಟ್ಟಾರಣ್ಯದ ನಡುವೆ ತೋಟದೊಳಗಿನ ಲೈನ್ ಮನೆಯಲ್ಲಿ ವಾಸವಿರುವ ನಾಲ್ಕು ಕುಟುಂಬಗಳು ಆತಂಕದಿಂದ ಇದ್ದಾರೆ. ಮಾಧ್ಯಮದವರಿಗೆ ಯಾವುದೇ ಹೇಳಿಕೆ ನೀಡದಂತೆ ಜಿಲ್ಲಾ ಎಸ್‍ಪಿ ರಾಜೇಂದ್ರ ಪ್ರಸಾದ್ ಪೊಲೀಸರಿಗೆ ಒತ್ತಡವನ್ನೂ ಹೇರಿದ್ದರು ಎನ್ನಲಾಗಿದೆ.

Comments

Leave a Reply

Your email address will not be published. Required fields are marked *