ಕರಾವಳಿಯ ಆಗಸದಲ್ಲಿ ತಪ್ಪಿತು ದುರಂತ – ಸೇನಾ ವಿಮಾನ ಮಂಗಳೂರಲ್ಲಿ ತುರ್ತು ಭೂಸ್ಪರ್ಶ

ಮಂಗಳೂರು: ಕರಾವಳಿಯ ಆಗಸದಲ್ಲಿ ಭಾರೀ ದುರಂತವೊಂದು ಮಂಗಳವಾರ ಪೈಲಟ್‍ಗಳ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಜಸ್ಟ್ ಮಿಸ್ ಆಗಿದೆ. ಭಾರತೀಯ ಸೇನೆಗೆ ಸೇರಿದ ಮಿಲಿಟರಿ ವಿಮಾನವೊಂದು ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ್ದರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯ ನಿರ್ವಹಣೆ ಇಂದು 5 ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತ್ತು.

ಮಿಗ್ ಫೈಟರ್-29 ಯುದ್ಧ ವಿಮಾನ ಇಂದು ಸಂಜೆ 4 ಗಂಟೆ ವೇಳೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ವೇಳೆ ವಿಮಾನದ ಟೈರ್ ಸ್ಫೋಟಗೊಂಡಿದೆ.

ನೆರೆಯ ರಾಜ್ಯ ಗೋವಾದಲ್ಲಿದ್ದ ಯುದ್ಧ ವಾಹಕ ನೌಕೆ ಐಎನ್‍ಎಸ್ ವಿಕ್ರಮಾದಿತ್ಯದಿಂದ ಟೇಕಾಫ್ ಆಗಿತ್ತು. ತರಬೇತಿಗಾಗಿ ಈ ಹಾರಾಟ ನಡೆಸಲಾಗುತ್ತಿತ್ತು. ಆದರೆ ಆಗಸದಲ್ಲಿ ಹೈಡ್ರಾಲಿಕ್ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಲಾಯಿತು. ಯುದ್ಧ ವಿಮಾನದ ತರಬೇತಿ ವೇಳೆ ಮಿಗ್ 29ಕೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿತು. ತಕ್ಷಣ ವಿಮಾನವನ್ನು ಮಂಗಳೂರಿಗೆ ಡೈವರ್ಟ್ ಮಾಡಲಾಗಿದೆ ಎಂದು ನೌಕಾಪಡೆಯ ವಕ್ತಾರರಾದ ಕ್ಯಾಪ್ಟನ್ ಡಿಕೆ ಶರ್ಮಾ ತಿಳಿಸಿದ್ದಾರೆ. ಆದರೆ ವಿಮಾನ ತುರ್ತು ಭೂಸ್ಪರ್ಶವಾಗುತ್ತಿದ್ದಂತೆ 2 ಟೈರ್ ಸ್ಫೋಟಗೊಂಡಿವೆ. ಇದರಿಂದ ಮಂಗಳೂರು ವಿಮಾನನಿಲ್ದಾಣದಲ್ಲಿ ವಿಮಾನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದೂ ಅವರು ತಿಳಿಸಿದ್ದಾರೆ.

8 ವಿಮಾನಗಳ ಹಾರಾಟಕ್ಕೆ ಅಡ್ಡಿ: ಘಟನೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಎರಡು ರನ್ ವೇಗಳನ್ನು ಬಂದ್ ಮಾಡಿದ್ದರು. ಇದರಿಂದಾಗಿ ಸಂಜೆ 5ರಿಂದ 8 ಗಂಟೆಯೊಳಗಿನ ಒಟ್ಟು 8 ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗಿದೆ. ಮಂಗಳೂರಿಗೆ ಬರುವ ವಿಮಾನಗಳನ್ನು ಡೈವರ್ಟ್ ಮಾಡಿ ಬೆಂಗಳೂರಿಗೆ ಕಳಿಸಲಾಯಿತು. ಅಲ್ಲದೆ ದೆಹಲಿಯಿಂದ ಮಂಗಳೂರಿಗೆ ಆಗಮಿಸಿದ್ದ ವಿಮಾನ ಬೆಂಗಳೂರಿಗೆ ಹಿಂತಿರುಗಿದೆ.

3 ವಿಮಾನಗಳ ಲ್ಯಾಂಡಿಂಗ್ ಹಾಗೂ 5 ವಿಮಾನಗಳ ಟೇಕಾಫ್‍ಗೆ ಸಮಸ್ಯೆಯಾಯಿತು ಎಂದು ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *