ಮಹಿಷಾಸುರನ ಸಂಹಾರಕ್ಕೆ ಧರೆಗಿಳಿದ ದುರ್ಗೆ ಅಸುರನಿಗೆ ಒದ್ದ ಪುಣ್ಯಕ್ಷೇತ್ರ ʻವದ್ದಳ್ಳಿʼ

ಹಿಷಾಸುರನ (Mahishasura) ಸಂಹಾರಕ್ಕೆ ಅವತರಿಸಿದ ದುರ್ಗಾದೇವಿ, ಅವನ ಜೊತೆ ಯುದ್ಧ ಮಾಡುತ್ತಾ ಭೂಲೋಕದ ತುಂಬೆಲ್ಲ ಅಟ್ಟಾಡಿಸುತ್ತಾಳೆ. ಹೀಗೆ ಅಟ್ಟಾಡಿಸುತ್ತಾ ರಾಕ್ಷಸನಿಗೆ ಒದ್ದು ಮಲೆನಾಡಿನ ಒಂದು ಭಾಗದಲ್ಲಿ ನೆಲೆಯೂ ಆಗುತ್ತಾಳೆ. ಮಹಿಷಾಸುರನಿಗೆ ಒದ್ದ ಆ ಜಾಗ ಇಂದಿಗೂ ʻವದ್ದಳ್ಳಿʼ ಕ್ಷೇತ್ರವೆಂದೆ ಕರೆಯಲ್ಪಡುತ್ತದೆ. ಆ ಪುಣ್ಯ ಭೂಮಿಯ ಬಗ್ಗೆ ಹಾಗೂ ದೇವಾಲಯದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಮಹಿಷಾಸುರ ಬ್ರಹ್ಮ ದೇವನಿಂದ ವರ ಪಡೆದು ಭೂಮಿ, ಸ್ವರ್ಗ ಮತ್ತು ಪಾತಾಳಲೋಕವನ್ನು ತನ್ನ ವಶಕ್ಕೆ ಪಡೆದು ದೇವಾನು ದೇವತೆಗಳನ್ನೇ ಭಯಭೀತರಾಗುವಂತೆ ಮಾಡಿದ್ದ. ತನ್ನ ದರ್ಪದಿಂದ ಮಹಿಷಾಸುರ ಭೂಮಿಯನ್ನು ವಶಪಡಿಸಿಕೊಂಡ ನಂತರ ಭೂಮಿಯ ಸುತ್ತೆಲ್ಲಾ ಬರೀ ಕತ್ತಲೆಯೇ ಮನೆ ಮಾಡಿತ್ತು. ಆತನ ಅಟ್ಟಹಾಸವನ್ನು ತಡೆಯಲಾಗದೆ ದೇವತೆಗಳು, ಋಷಿ ಮುನಿಗಳು ಒಗ್ಗೂಡಿ ದುರ್ಗಾ ದೇವಿಯನ್ನು ಸ್ಮರಿಸಿ ಮಹಿಷಾಸುರನಿಂದ ಆಗುತ್ತಿದ್ದ ತೊಂದರೆಗಳಿಂದ ಪಾರು ಮಾಡುವಂತೆ ಬೇಡಿಕೊಳ್ಳುತ್ತಾರೆ.

ದೇವತೆಗಳು ಹಾಗೂ ಋಷಿಗಳ ಮನವಿಗೆ ದುರ್ಗಾದೇವಿ ಒಲಿದು ಭೂಲೋಕ ಹಾಗೂ ದೇವತೆಗಳ ರಕ್ಷಣೆಗೆ ಭೂಲೋಕಕ್ಕೆ ಬಂದು ಮಹಿಷಾಸುರನ ವಿರುದ್ಧ ಯುದ್ಧ ಆರಂಭಿಸುತ್ತಾಳೆ. ಹೀಗೆ ಯುದ್ದ ಮಾಡುತ್ತಾ ಮಹಿಷಾಸುರನನ್ನು ಅಟ್ಟಾಡಿಸಿಕೊಂಡು ಬಂದು ಮಲೆನಾಡಿನ ತಪ್ಪಲಿನಲ್ಲಿ ರಾಕ್ಷಸನಿಗೆ ಒದೆಯುತ್ತಾಳೆ. ಈ ಜಾಗ ʻವದ್ದಳ್ಳಿʼ ಎಂದು ಹೆಸರಾಗುತ್ತದೆ. ಮುಂದೆ ದುರ್ಗಾಂಬಾ ದೇವಿಯನ್ನು (Varadahalli Durgamba Temple) ಭಗವಾನ್ ವ್ಯಾಸಮಹರ್ಷಿಗಳು ಇಲ್ಲಿ ಪ್ರತಿಷ್ಠಾಪಿಸುತ್ತಾರೆ. ಈ ಮಂದಿರದಲ್ಲಿ ದೇವಿಯ ವಿಗ್ರಹ ಮಹಿಷಾಸುರನಿಗೆ ಒದೆಯುವ ಭಂಗಿಯಲ್ಲಿಯೇ ಇದೆ. ದೇವಿಯ ಮೂರ್ತಿಯು ಸಾಲಿಗ್ರಾಮ ಶಿಲೆಯಿಂದ ಕೆತ್ತಲ್ಪಟ್ಟಿದೆ. ಹಾಗಾಗಿ ಇಲ್ಲಿ ವಿಷ್ಣು ಶಕ್ತಿಯೂ ಅಡಕವಾಗಿದೆ ಎನ್ನಲಾಗುತ್ತದೆ.

ಇಲ್ಲಿಯ ಮಣ್ಣಿನ ಕಣಕಣವೂ ದೈವೀಶಕ್ತಿಯ ಆವಿರ್ಭಾವವೇ ತುಂಬಿದೆ. ಶಕ್ತಿರೂಪಿಣಿಯಾಗಿ ಇಲ್ಲಿ ಭಕ್ತಾರ ಅನುಗ್ರಹಿಸುತ್ತಾಳೆ. ದೇವಾಲಯದ ಆವರಣ ಪ್ರವೇಶಿಸುತ್ತಿದಂತೆಯೇ ಎಡ ಭಾಗದ ಚಂದ್ರ ಸಾಲೆಯಲ್ಲಿ ಶ್ರೀಧರರ ಭಾವಚಿತ್ರವಿರುವ ಸಿಂಹಾಸನವೊಂದು ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಶ್ರೀಧರರು ತಮ್ಮ ಜೀವಮಾನದಲ್ಲಿ ಹೆಚ್ಚಿನ ಪ್ರವಚನವನ್ನು ಇದೇ ಕಟ್ಟೆಯಲ್ಲಿ ಕುಳಿತು ಮಾಡಿದ್ದರಂತೆ. ಉತ್ಸವಕಟ್ಟೆ ಅಥವ ಶ್ರೀಧರ ಪ್ರವಚನ ಕಟ್ಟೆ ಎಂದೂ ಇದನ್ನು ಸ್ಥಳೀಯರು ಕರೆಯುತ್ತಾರೆ.

ದುಷ್ಟ ರಾಕ್ಷಸ ಮಹಿಷಾಸುರನನ್ನು ದುರ್ಗಾ ದೇವಿ ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ವಿಜಯದಶಮಿಯಂದು ತನ್ನ ತ್ರಿಶೂಲದಿಂದ ಸಂಹಾರ ಮಾಡುತ್ತಾಳೆ. ಅಂದಿನಿಂದ ದುರ್ಗಾ ದೇವಿಯನ್ನು ಈ ಸ್ಥಳದಲ್ಲಿ ಚಾಮುಂಡೇಶ್ವರಿ ಎಂದು ಪೂಜಿಸಲಾಗುತ್ತಿದೆ.

(ಶಿವಮೊಗ್ಗ ಜಿಲ್ಲೆಯ ತಾಲೂಕು ಕೇಂದ್ರವಾದ ಸಾಗರದಿಂದ ಕೇವಲ 8 ಕಿಲೋಮೀಟರ್ ದೂರದಲ್ಲಿ ಶ್ರೀ ದುರ್ಗಾಂಬಾ ದೇವಿಯ ಸನ್ನಿಧಿ ಇದೆ. ಈ ಸ್ಥಳಕ್ಕೆ ವದ್ದಳ್ಳಿ, ವರದಹಳ್ಳಿ ಅಥವ ವರದಪುರ ಎಂಬುದಾಗಿಯೂ ಕರೆಯುತ್ತಾರೆ.)