ನ್ಯಾಷನಲ್‌ ಹೆರಾಲ್ಡ್‌ ಸೋನಿಯಾ, ರಾಹುಲ್‌ ಗಾಂಧಿ ವೈಯಕ್ತಿಕ ಆಸ್ತಿಯಲ್ಲ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರ ವೈಯಕ್ತಿಕ ಆಸ್ತಿಯಲ್ಲ ಎಂದು ರಾಜ್ಯಸಭಾ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ರಾಹುಲ್‌ ಗಾಂಧಿ ಅವರನ್ನು ಇ.ಡಿ ವಿಚಾರಣೆಗೆ ಒಳಪಡಿಸಿರುವುದನ್ನು ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ ವೇಳೆ ಮಾತನಾಡಿದ ಖರ್ಗೆ, ಸ್ವತಂತ್ರ್ಯ ನಂತರ ನೆಹರೂ ಅವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹುಟ್ಟುಹಾಕಿದರು. ಇಂಗ್ಲಿಷ್, ಹಿಂದಿ, ಉರ್ದು ಮೂರು ಭಾಷೆಗಳಲ್ಲಿ ಪತ್ರಿಕೆ ನಡೆಯಿತು. 2008ರ ಬಳಿಕ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಪತ್ರಿಕೆ ಮುಚ್ಚಲಾಯಿತು. ನಂತರ ನೌಕರರ ಬಾಕಿ ಹಣ ತೀರಿಸಲು 90 ಕೋಟಿ ರೂ. ಸಾಲ ಮಾಡಲಾಗಿತ್ತು. ಜಾತ್ಯತೀತ ತತ್ವದ ಪ್ರಚಾರಕ್ಕಾಗಿ ಈ ಪತ್ರಿಕೆ ರೂಪಿಸಲಾಗಿತ್ತು. ಅದೇ ಕಾರಣಕ್ಕೆ ನ್ಯಾಷನಲ್ ಹೆರಾಲ್ಡ್ ಅನ್ನು ಯಂಗ್ ಇಂಡಿಯಾ ಸಂಸ್ಥೆಗೆ ನೀಡಲಾಗಿದೆ ಎಂದು ಇತಿಹಾಸದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಹುಲ್‍ಗೆ 11 ಗಂಟೆ ಇಡಿ ಡ್ರಿಲ್‌ – ಇಂದು ಹಾಜರಾಗುವಂತೆ ಸೂಚನೆ

9 ವರ್ಷದ ಬಳಿಕ ಇ.ಡಿ ಈ ಬಗ್ಗೆ ದೂರು ದಾಖಲಿಸಿಕೊಂಡಿದೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಧೈರ್ಯ ಕಡಿಮೆ ಮಾಡಲು ಈ ದಾಳಿ ನಡೆಸಲಾಗಿದೆ. ರಾಹುಲ್ ಗಾಂಧಿ, ಹಣದುಬ್ಬರ, ನಿರುದ್ಯೋಗ ಮತ್ತಿತರ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಬಾಯಿ ಮುಚ್ಚಿಸಲು ಇ.ಡಿ ದಾಳಿ ಮಾಡಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಯಂಗ್ ಇಂಡಿಯನ್ ಸಂಸ್ಥೆ ಬೈಲಾ ಪ್ರಕಾರ ಯಾರೂ ಹಣ ತೆಗೆಯಲು ಸಾಧ್ಯವಿಲ್ಲ. ಸದಸ್ಯರು ಟಿಎ-ಡಿಎ ಅನ್ನು ಕೂಡ ಡ್ರಾ ಮಾಡಲು ಸಾಧ್ಯವಿಲ್ಲ. ಆದರೂ ಕೇಂದ್ರ ಸರ್ಕಾರ ದುರುದ್ದೇಶದಿಂದ ದೂರು ದಾಖಲಿಸಿಕೊಂಡಿದೆ. ಕೇಂದ್ರ ಸರ್ಕಾರದ ದುರುದ್ದೇಶದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಶಾಂತಯುತವಾಗಿ ಪ್ರತಿಭಟನೆ ಮಾಡಲು ಮುಂದಾಗಿದ್ದೆವು. ಆದರೆ ಎಐಸಿಸಿ ಕಚೇರಿಗೆ ಬರುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ನನ್ನ ಕಚೇರಿಗೆ ಬರುವುದಕ್ಕೂ ತಡೆಯೊಡ್ಡುತ್ತಿದ್ದಾರೆ. ನಮ್ಮ ನಾಯಕರನ್ನು ಭೇಟಿ ಮಾಡುವುದನ್ನೂ ತಡೆಯುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ತಳ್ಳಿದ ಪೊಲೀಸರು – ಮೂಳೆ ಮುರಿತಕ್ಕೊಳಗಾದ ಪಿ.ಚಿದಂಬರಂ

ಕಾಂಗ್ರೆಸ್ ಪಕ್ಷದ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಈ ದಬ್ಬಾಳಿಕೆಗೆ ಕಾಂಗ್ರೆಸ್ಸಿಗರು ಜಗ್ಗಲ್ಲ. ಬಿಜೆಪಿಯವರಿಗೆ ಸತ್ಯಾಗ್ರಹ ಗೊತ್ತಿಲ್ಲ, ಚಳವಳಿ ಗೊತ್ತಿಲ್ಲ. ಬಿಜೆಪಿಯವರಿಗೆ ಪ್ರಚೋದನಕಾರಿ ಭಾಷಣ ಮಾಡುವುದು ಗೊತ್ತು. ರಾಷ್ಟ್ರದ ಹಿತಕ್ಕಾಗಿ ಕಾಂಗ್ರೆಸ್ ಪತ್ರಿಕೆಗಳನ್ನು ಹುಟ್ಟು ಹಾಕಿದೆ. ರಾಷ್ಟ್ರದ ಹಿತಕ್ಕಾಗಿ ಬಿಜೆಪಿ ಯಾವ ಪತ್ರಿಕೆಯನ್ನೂ ತೆರೆದಿಲ್ಲ ಎಂದು ಕುಟುಕಿದ್ದಾರೆ.

Comments

Leave a Reply

Your email address will not be published. Required fields are marked *