ಶಿಕ್ಷಣದಲ್ಲಿ ಹಿಂದಿ ಹೇರಿಕೆ ಮಾಡಲ್ಲ – ಕೇಂದ್ರ ಸರ್ಕಾರ ಸ್ಪಷ್ಟನೆ: ಏನಿದು ವಿವಾದ?

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಹಿಂದಿಯನ್ನು ಹೇರಿಕೆ ಮಾಡುವುದಿಲ್ಲ ಎಂದು ತಿಳಿಸಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಪರಿಸರ ಸಚಿವ ಪ್ರಕಾಶ್ ಜಾವಡೇಕರ್, ಯಾವುದೇ ರಾಜ್ಯದ ಮೇಲೆ ಭಾಷೆಯನ್ನು ಹೇರಿಕೆ ಮಾಡುವುದಿಲ್ಲ. ಎಲ್ಲ ಭಾಷೆಗಳನ್ನು ನಾವು ಪ್ರೋತ್ಸಾಹಿಸುತ್ತೇವೆ. ಸಾರ್ವಜನಿಕರ ಅಭಿಪ್ರಾಯವನ್ನು ಸಿದ್ಧಪಡಿಸಿ ನೀತಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಮಾಜಿ ಇಸ್ರೋ ಮುಖ್ಯಸ್ಥ ಡಾ. ಕಸ್ತೂರಿ ರಂಗನ್ ಅವರು ಸಮಿತಿ ತನ್ನ ವರದಿಯ ಡ್ರಾಫ್ಟ್ ಅನ್ನು ಮೇ 31 ರಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಕೆ ಮಾಡಿತ್ತು.

ದೇಶದ ಶಿಕ್ಷಣ ವ್ಯವಸ್ಥೆ ಅಗತ್ಯವಿರುವ ಬದಲಾವಣೆಗಳನ್ನು ಕೈಗೊಳ್ಳಲು ಸಮಿತಿ ತನ್ನ ವರದಿಯಲ್ಲಿ ಪ್ರಸ್ತಾಪ ಮಾಡಿದೆ. ವರದಿ ಸಲ್ಲಿಕೆಯಾದ ಬೆನ್ನಲ್ಲೇ ವಿವಾದವೂ ಹುಟ್ಟಿಕೊಂಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2019ರ ಕರಡನ್ನು ಅನ್ನು ಸಚಿವಾಲಯ ತನ್ನ ಅಧಿಕೃತ ವೆಬ್‍ಸೈಟ್ ಪ್ರಕಟ ಮಾಡಿತ್ತು. ಸದ್ಯ ಪ್ರಾದೇಶಿಕ ಭಾಷಾ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ವರದಿಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಶಿಫಾರಸ್ಸು ಏನು?
ಕಸ್ತೂರಿ ರಂಗನ್ ಅವರ ರಾಷ್ಟ್ರೀಯ ಶಿಕ್ಷಣ ನೀತಿ ವರದಿಯಲ್ಲಿ ದೇಶದಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವೇಳೆ ಮಕ್ಕಳಿಗೆ ಕಡ್ಡಾಯವಾಗಿ 2 ಭಾಷೆ ಕಲಿಯಬೇಕು ಎಂಬ ನಿಯಮವನ್ನು ವಿಧಿಸಲಾಗಿದೆ. ಇದು ತ್ರಿಭಾಷಾ ಸೂತ್ರದಡಿ ಈ ನಿಯಮವನ್ನು ರಚಿಸಲಾಗಿದ್ದು, ಇಂಗ್ಲಿಷ್, ಹಿಂದಿ ಭಾಷೆಗಳನ್ನು ಕಡ್ಡಾಯಗೊಳಿಸಲಾಗಿದೆ. ಹಿಂದಿಯೇತರ ರಾಜ್ಯಗಳಲ್ಲಿ ಪ್ರಮುಖವಾಗಿ ಪ್ರಾದೇಶಿಕ ಭಾಷೆಯಾಗಿ ಐಚ್ಛಿಕವಾಗಿ ಕಲಿಯಬಹುದು ಎಂದು ಶಿಫಾರಸು ಮಾಡಿದೆ.

ಏನಿದು ತ್ರಿಭಾಷಾ ಸೂತ್ರ?
1968 ರಲ್ಲಿ ಜಾರಿಗೆ ಮಾಡಲಾಗಿದ್ದ ತ್ರಿಭಾಷಾ ಸೂತ್ರದ ಅನ್ವಯ ಹಿಂದಿ ಭಾಷೆ ಮಾತನಾಡುವ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಒಂದು ಭಾರತೀಯ ಭಾಷೆ (ದಕ್ಷಿಣ ಭಾಷೆಗಳಲ್ಲಿ) ಕಲಿಕೆ. ಹಿಂದಿ ಮಾತನಾಡದ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಆಯಾ ಪ್ರಾದೇಶಿಕ ಭಾಷೆ ಕಲಿಸಬೇಕಿತ್ತು.

ಈ ನೀತಿ ಜಾರಿಗೆ ಆಗಿದ್ದರೂ ಕೂಡ ತ್ರಿಭಾಷಾ ನೀತಿ ಯಶಸ್ವಿಯಾಗಿಲ್ಲ. ಏಕೆಂದರೆ ಭಾಷಾ ಶಿಕ್ಷಕರ ಕೊರತೆ ಹಾಗೂ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಕಲಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಂದಿನ ತಮಿಳು ನಾಡು ಸರ್ಕಾರ ತ್ರಿಭಾಷಾ ನೀತಿಯನ್ನ ತಿರಸ್ಕರಿಸಿ ದ್ವಿಭಾಷಾ ನೀತಿಯನ್ನೇ ಅಳವಡಿಸಿಕೊಂಡಿತ್ತು.

ಕೇಂದ್ರದ ಸ್ಪಷ್ಟನೆ: ಹಿಂದಿ ಭಾಷೆಯ ಕಲಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರದ ಅನ್ವಯ ಹಿಂದಿ ಭಾಷೆ ಆಯಾ ವಿದ್ಯಾರ್ಥಿಯ ಆಯ್ಕೆಯಾಗಿದೆ ಎಂದು ತಿಳಿಸಿದೆ. ಅಲ್ಲದೇ ಕರಡನ್ನು ಬದಲಾಯಿಸಿರುವ ಕೇಂದ್ರ ಸರ್ಕಾರ ಹಿಂದಿ ಐಚ್ಛಿಕ ಭಾಷೆಯಾಗಿ ಕಲಿಸಿದರೆ ಸಾಕು ಎಂದು ತಿಳಿಸಿದೆ.

ವಿರೋಧ ಏಕೆ?
ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಹಿಂದಿ ಕಲಿಕೆ ಕಡ್ಡಾಯ ಎಂಬ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದಂತೆ ಈ ಬಗ್ಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಿಂದಿಯನ್ನು ಬಲವಂತವಾಗಿ ಹಿಂದಿಯೇತರ ರಾಜ್ಯಗಳ ಮೇಲೆ ಹಾಕಲಾಗುತ್ತಿದೆ ಎಂದು ಆರೋಪಿಸಿ ವಿರೋಧಿಸಿ ಅಭಿಯಾನವನ್ನು ನಡೆಸಲಾಗಿತ್ತು. ಸದ್ಯ ಕೇಂದ್ರ ವಿವಾದ ಅಂಶವುಳ್ಳ ಸಂಗತಿಯನ್ನ ಡ್ರಾಫ್ಟ್‍ನಿಂದ ತೆಗೆದು ಹಾಕಿ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ ಅವರು ಸ್ಪಷ್ಟನೆ ನೀಡಿ, ಯಾವುದೇ ಕಾರಣಕ್ಕೂ ಸ್ಥಳೀಯ ಭಾಷೆಗಳನ್ನು ಕಡೆಗಣಿಸುವಂತಿಲ್ಲ. ಭಾರತದ ಅಖಂಡತೆ, ವೈವಿಧ್ಯತೆ ಕಾಪಾಡಲು ಕೇಂದ್ರ ಸರ್ಕಾರ ಬದ್ಧ ಎಂದಿದ್ದಾರೆ.

Comments

Leave a Reply

Your email address will not be published. Required fields are marked *