ವೈಟ್ ಹೌಸ್‍ನಲ್ಲಿ ಮೊಳಗಿದ ವೈದಿಕ ಶಾಂತಿ ಮಂತ್ರ

ವಾಶಿಂಗ್ಟನ್: ಅಮೆರಿಕದ ಸಂಸತ್ ಭವನದ ವೈಟ್ ಹೌಸ್‍ನಲ್ಲಿ ವೈದಿಕ ಶಾಂತಿ ಮಂತ್ರ ಮೊಳಗಿದೆ.

ರಾಷ್ಟ್ರೀಯ ಪ್ರಾರ್ಥನಾ ದಿನದ ಅಂಗವಾಗಿ ವೈಟ್‍ಹೌಸ್‍ನ ರೋಸ್ ಗಾರ್ಡನ್‍ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಧರ್ಮದ ಧರ್ಮ ಗುರುಗಳು ಪ್ರಾರ್ಥನೆ ಸಲ್ಲಿಸಿದರು. ಈ ಕಾರ್ಯಕ್ರಮವನ್ನು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿಕೊಟ್ಟರು. ಈ ವೇಳೆ ಹಿಂದೂ ಧರ್ಮದ ವೈದಿಕ ಶಾಂತಿ ಮಂತ್ರವನ್ನು ಪಠಿಸಲಾಯಿತು. ನ್ಯೂ ಜರ್ಸಿಯ ಸ್ವಾಮಿನಾರಾಯಣ ಮಂದಿರದ ಹರೀಶ್ ಬ್ರಹ್ಮಭಟ್ ಅವರು ಶಾಂತಿ ಮಂತ್ರವನ್ನು ಪಠಿಸಿದರು.

ಕೊರೊನಾ ಮಹಾಮಾರಿ ತೊಲಗಿ ವಿಶ್ವದಲ್ಲಿ ಶಾಂತಿ ನೆಲೆಸಲೆಂದು ಭಾರತದ ಪರವಾಗಿ ಈ ಮಂತ್ರವನ್ನು ಪಠಿಸಲಾಯಿತು. ರಾಷ್ಟ್ರೀಯ ಪ್ರಾರ್ಥನಾ ದಿನವು ಅಮೆರಿಕದಲ್ಲಿ ಪ್ರತಿ ವರ್ಷ ನಡೆಯುತ್ತದೆ. ಮೊದಲ ಬಾರಿಗೆ 1988ರಲ್ಲಿ ಸಾರ್ವಜನಿಕವಾಗಿ ಈ ದಿನವನ್ನು ಆಚರಿಸಲಾಗಿತ್ತು. ಇದೀಗ ಡಿಜಿಟಲ್ ರೂಪದಲ್ಲಿ ಪ್ರಾರ್ಥನಾ ದಿನವನ್ನು ಆಚರಿಸಿದ್ದು, ಈ ಕಾರ್ಯಕ್ರಮಕ್ಕೆ ಮೊದಲ ಮಹಿಳೆಯಾಗಿ ಮಿಲಾನಿಯಾ ಟ್ರಂಪ್ ಆಗಮಿಸಿದ್ದರು.

ಈ ವೇಳೆ ಮಾತನಾಡಿದ ಹರೀಶ್ ಬ್ರಹ್ಮಭಟ್, ಶಾಂತಿ ಮಂತ್ರ ವಿಶ್ವವು ಶ್ರೀಮಂತವಾಗಲಿ, ಗೆಲುವು ಸಾಧಿಸಲಿ ಎಂದು ಬಯಸುವುದಲ್ಲ, ಎಲ್ಲೆಡೆ ಶಾಂತಿ ನೆಲೆಸಲು ಹಿಂದೂಗಳು ಪಠಿಸುವ ಮಂತ್ರವಾಗಿದೆ. ಇದನ್ನು ಯಜುರ್ವೇದದಿಂದ ಪಡೆಯಲಾಗಿದೆ ಎಂದು ತಿಳಿಸಿದರು. ಅಲ್ಲದೆ ಮೊದಲು ಸಂಸ್ಕøತದಲ್ಲಿ ಪಠಿಸಿ ನಂತರ ಇಂಗ್ಲಿಷ್‍ನಲ್ಲಿ ಭಾಷಾಂತರಿಸಿ ಹೇಳಿದರು.

ಸವಾಲಿನ ಸಂದರ್ಭದಲ್ಲಿ ನಮ್ಮ ಜನರು ಯಾವಾಗಲೂ ನಂಬಿಕೆ, ಆಶೀರ್ವಾದ, ಪ್ರಾರ್ಥನಾ ಶಕ್ತಿಯೊಂದಿಗೆ ದೇವರನ್ನು ನೆನೆಯುತ್ತಾರೆ. ಶಕ್ತಿ ಮತ್ತು ಸಾಂತ್ವನಕ್ಕಾಗಿ, ಧೈರ್ಯ ಮತ್ತು ಸೌಕರ್ಯಕ್ಕಾಗಿ, ಭರವಸೆ ಮತ್ತು ಚಿಕಿತ್ಸೆಗಾಗಿ, ಚೇತರಿಕೆ ಮತ್ತು ನವೋದಯಕ್ಕಾಗಿ ಸ್ವರ್ಗದಲ್ಲಿರುವ ದೇವರನ್ನು ಪ್ರಾರ್ಥಿಸುತ್ತಾರೆ. ಎಲ್ಲ ಅಮೆರಿಕನ್ನರು ಸಹ ನಮ್ಮೊಂದಿಗೆ ನಮ್ಮ ಆಧ್ಯಾತ್ಮದೊಂದಿಗೆ ಬೆರೆಯಬೇಕು ಎಂದು ಹರೀಶ್ ಬ್ರಹ್ಮಭಟ್ ಮನವಿ ಮಾಡಿದ್ದಾರೆ. ಅವರು ಮಾತನಾಡುವುದು ಪೂರ್ಣಗೊಳ್ಳುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಧನ್ಯವಾದ ಅರ್ಪಿಸಿದ್ದಾರೆ.

Comments

Leave a Reply

Your email address will not be published. Required fields are marked *