ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಸರ್ಕಾರದಿಂದ ವಿಶೇಷ ಗೌರವ: ಏನಿದು ಹೊಸ ವೆಬ್‍ಸೈಟ್? ಮಾಹಿತಿ ಪಡೆಯೋದು ಹೇಗೆ?

ನವದೆಹಲಿ: ಇದೂವರೆಗೂ ಎಷ್ಟು ಮಂದಿಗೆ ಭಾರತ ಸರ್ಕಾರ ಪರಮವೀರ ಚಕ್ರ ಗೌರವ ನೀಡಿದೆ? ಪರಮವೀರ ಚಕ್ರ ಪಡೆದ ಸೈನಿಕರ ಸಾಹಸ ಏನು? ಈ ಪ್ರಶ್ನೆಗಳಿಗೆ ಇಲ್ಲಿಯವರೆಗೆ ಸುಲಭವಾಗಿ ಬೇಗನೆ ಉತ್ತರ ಸಿಗುತ್ತಿರಲಿಲ್ಲ. ಆದರೆ ಇನ್ನು ಮುಂದೆ ನೀವು ಬೆರಳ ತುದಿಯಲ್ಲಿ ಪರಮವೀರ ಚಕ್ರ, ಮಹಾವೀರ ಚಕ್ರ ಸೇರಿದಂತೆ ಶೌರ್ಯ ಗೌರವಕ್ಕೆ ಪಾತ್ರರಾದ ಸೈನಿಕರ ಮಾಹಿತಿಯನ್ನು ಪಡೆಯಬಹುದು.

ದೇಶಕ್ಕಾಗಿ ಮಡಿದ ಸೈನಿಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಗೌರವ ಪದಕ ಪಡೆದ ಸೈನಿಕರ ಮಾಹಿತಿ ತಿಳಿಸುವ ಸಂಬಂಧ ಹೊಸ ವೆಬ್‍ಸೈಟನ್ನು ಆರಂಭಿಸಿದೆ. 71ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ http://gallantryawards.gov.in/ ವೆಬ್‍ಸೈಟನ್ನು ಲೋಕಾರ್ಪಣೆ ಮಾಡಿದ್ದಾರೆ.

ವೆಬ್ ಸೈಟ್ ಲೋಕಾರ್ಪಣೆ ಮಾಡಿ ಟ್ವೀಟ್ ಮಾಡಿದ ಮೋದಿ, ದೇಶಕ್ಕಾಗಿ ಶೌರ್ಯ ತೋರಿದ ಸೈನಿಕರು, ನಾಗರಿಕರ ಬಗ್ಗೆ ಜನರಿಗೆ ಮಾಹಿತಿ ನೀಡಲು ಈ ವೆಬ್‍ಸೈಟನ್ನು ತೆರೆಯಲಾಗಿದೆ. ಈ ವೆಬ್‍ಸೈಟ್ ನಲ್ಲಿ ಪ್ರಕಟವಾಗಿರುವ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿ, ಫೋಟೋಗಳು ಇದ್ದರೆ ಕಳುಹಿಸಿಕೊಡಿ. ಈ ವೆಬ್‍ಸೈಟ್ ಮತ್ತಷ್ಟು ಸುಧಾರಣೆ ಮಾಡಲು ನೀವು ಸಲಹೆ, ಪ್ರತಿಕ್ರಿಯೆಗಳನ್ನು ನೀಡಬಹುದು ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವೆಬ್‍ಸೈಟ್ ನಲ್ಲಿ ಏನಿದೆ?
ಪರಮ ವೀರ ಚಕ್ರ, ಮಹಾ ವೀರ ಚಕ್ರ, ವಿರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರ ಪಡೆದವರ ಫೋಟೋ ಮತ್ತು ವಿವರಗಳನ್ನು ನೀಡಲಾಗಿದೆ. 1950 ರಿಂದ ಪ್ರಾರಂಭವಾಗಿ 2017ರ ವರೆಗೆ ಈ ಗೌರವ ಪಡೆದ ವ್ಯಕ್ತಿಗಳ ವಿವರ ಈ ತಾಣದಲ್ಲಿ ಇದೆ.

ಈ ಪದಕವನ್ನು ಯಾಕೆ ನೀಡಲಾಗುತ್ತದೆ? ಈ ಪದಕದಲ್ಲಿರುವ ವಿಶೇಷತೆ ಏನು? ಈ ಗೌರವ ಪಡೆಯಲು ಬೇಕಾಗಿರುವ ಮಾನದಂಡಗಳು ಏನು ಎನ್ನುವುದನ್ನು ವಿವರಿಸಲಾಗಿದೆ. 2006 ನೇ ಇಸ್ವಿಯಿಂದ ರಾಷ್ಟ್ರಪತಿಗಳು ಚಕ್ರ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವ ಫೋಟೋ/ ವಿಡಿಯೋಗಳು ಈ ತಾಣದಲ್ಲಿ ಸಿಗುತ್ತದೆ.

ಮಾಹಿತಿ ಪಡೆಯುವುದು ಹೇಗೆ?
ಹೋಮ್ ಪೇಜ್ ನಲ್ಲಿರುವ awardees ವಿಭಾಗಕ್ಕೆ ಹೋದರೆ ಪರಮ ವೀರ ಚಕ್ರ, ಮಹಾ ವೀರ ಚಕ್ರ, ವಿರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರದ ಫೋಟೋ ಕಾಣುತ್ತದೆ. ನೀವು ಆ ಫೋಟೋದ ಮೇಲೆ ಕ್ಲಿಕ್ ಮಾಡಿದರೆ ಇದೂವರೆಗೂ ಆ ಗೌರವಕ್ಕೆ ಪಾತ್ರರಾದವರ ಫೋಟೋಗಳು ಕಾಣುತ್ತದೆ. ಈ ಫೋಟೋದ ಮೇಲೆ ಕ್ಲಿಕ್ ಮಾಡಿದರೆ ಆ ವ್ಯಕ್ತಿಗೆ ಸಂಬಂಧಿಸಿದ ವಿವರ ಇರುವ ಹೊಸ ಪೇಜ್ ಓಪನ್ ಆಗುತ್ತದೆ.

Comments

Leave a Reply

Your email address will not be published. Required fields are marked *