ಈ ದೇಶದ ಸಾಲ ಮನ್ನಾ ಮಾಡಿದ್ದು ನರೇಂದ್ರ ಮೋದಿ: ಸಿದ್ದರಾಮಯ್ಯ

– ಭಾಷಣದ ವೇಳೆ ಸಿದ್ದರಾಮಯ್ಯ ಎಡವಟ್ಟು
– ನಾನು ಸಿಎಂ ಇದ್ದಾಗ ವರ್ಷಕ್ಕೆ 3 ಲಕ್ಷ ಮನೆ ಕೊಟ್ಟಿದ್ದೇನೆ

ಬೆಳಗಾವಿ: ಭಾಷಣದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಡವಟ್ಟು ಮಾಡಿಕೊಂಡ ಘಟನೆ ಇಂದು ನಡೆದಿದೆ. ಮನಮೋಹನ್ ಸಿಂಗ್ ಎಂದು ಹೇಳುವ ಬದಲು ಈ ದೇಶದ ಸಾಲ ಮನ್ನಾ ಮಾಡಿದ್ದು ನರೇಂದ್ರ ಮೋದಿ ಎಂದು ಹೇಳಿದರು. ಕೂಡಲೇ ತಪ್ಪಿನ ಅರಿವಾಗಿ ಸರಿಪಡಿಸಿಕೊಂಡ ಪ್ರಸಂಗ ನಡೆದಿದೆ.

ರಾಮದುರ್ಗ ತಾಲೂಕಿನ ಕಲ್ಲೂರ ಗ್ರಾಮ ಕಾಂಗ್ರೆಸ್ ಪ್ರಚಾರದ ವೇಳೆ ಮಾತನಾಡುತ್ತಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಜಿಪಂ, ತಾಪಂ ಚುನಾವಣೆಗೆ ಹೆದರಿಕೊಂಡು ಬಿಜೆಪಿ ಸರ್ಕಾರ ಮುಂದೆ ಹಾಕಿದೆ. ಬಿಜೆಪಿಯವರು ಒಬ್ಬರನ್ನ ನಿಲ್ಲಸಬೇಕಿತ್ತು ಇಬ್ಬರನ್ನ ನಿಲ್ಲಿಸಿದ್ದಾರೆ. ಬಿಜೆಪಿಯವರಿಗೆ ಇಬ್ಬಗೆ ರಾಜಕಾರಣ ಮಾಡಿ ಗೊತ್ತು. ಈ ಜಿಲ್ಲೆಯ ಲೀಡರ್ ರಮೇಶ್ ಜಾರಕಿಹೊಳಿ ಕಳೆದ ಬಾರಿ ನಮ್ಮ ಅಧಿಕೃತ ಅಭ್ಯರ್ಥಿಯನ್ನ ಸೋಲಿಸಿ ಬಿಟ್ಟರು. ಈ ಬಾರಿ ಅವರ ತಮ್ಮನನ್ನ ನಿಲ್ಲಿಸಿ ಬಿಜೆಪಿ ಅಭ್ಯರ್ಥಿ ಸೋಲಿಸಿದ್ರೂ ಆಶ್ಚರ್ಯ ಇಲ್ಲ. ನಾವು ಅದನ್ನ ಅನುಭವಿಸಿದ್ದೇವೆ ಎಂದರು.

ಬಿಜೆಪಿ ಅಧಿಕಾರದಲ್ಲಿದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇದ್ದಾರೆ. ಯಡಿಯೂರಪ್ಪ ಸಿಎಂ ಇದ್ರೂ ಬಿಜೆಪಿಯರು ಕಿತ್ತಾಕಿ ಬಿಟ್ಟರು. ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಯಿತು. ಒಂದು ಕೆಲಸವನ್ನಾದ್ರೂ ಇವರು ಮಾಡಿದ್ದಾರಾ ಹೇಳಿ..? ಇವರಿಗೆ ಯಾಕೆ ವೋಟ್ ಹಾಕಬೇಕು ಮಾನ ಮರ್ಯಾದೆ ಬೇಕಲ್ವಾ ಎಂದು ಪ್ರಶ್ನಿಸಿದರು.

ನಾನು ಸಿಎಂ ಇದ್ದಾಗ ವರ್ಷಕ್ಕೆ ಮೂರು ಲಕ್ಷ ಮನೆ ಕೊಟ್ಟಿದ್ದೇನೆ. ಬಿಜೆಪಿಯವರ ಮುಖಕ್ಕೆ ಮಂಗಳಾರತಿ ಎತ್ತಿ ಹೋಗ್ರಪ್ಪಾ ಅನ್ನಬೇಕು. ನಾನು 7 ಕೆ.ಜಿ ಅಕ್ಕಿ ಕೊಡ್ತಿದ್ದೆ, ಈಗ 5 ಕೆಜಿ ಕೊಡ್ತಿದ್ದಾರೆ. ಯಡಿಯೂರಪ್ಪ, ಬೊಮ್ಮಾಯಿ ಅವರಪ್ಪನ ಮನೆಯಿಂದ ಕೊಡ್ತಿದ್ರಾ ಅಕ್ಕಿನಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

2023ರಲ್ಲಿ ನಮ್ಮ ಪಕ್ಷ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುತ್ತೆ. ಅದನ್ನ ಯಾರಿಂದಲೂ ತಪ್ಪಿಸಲು ಆಗಲ್ಲ. ರಾಜ್ಯದ ಜನ ಈ ಸರ್ಕಾರ ಯಾವಾಗ ತೊಲಗುತ್ತೆ ಅಂತಾ ಶಾಪ ಹಾಕುತ್ತಿದ್ದಾರೆ. ಈ ದೇಶದ ಸಾಲಾ ಮನ್ನಾ ಮಾಡಿದ್ದು ನರೇಂದ್ರ ಮೋದಿ ಅಂತಾ ಬಾಯ್ತಪ್ಪಿ ಹೇಳಿದ ಸಿದ್ದರಾಮಯ್ಯ, ನಂತರ ಸ್ವಾರಿ ಸಾಲಾ ಮನ್ನಾ ಮಾಡಿದ್ದು ಮನಮೋಹನ್ ಸಿಂಗ್ ಎಂದರು.

ಐದು ರಾಜ್ಯಗಳಲ್ಲಿ ಸೋತ ಬಳಿಕ ಕೃಷಿ ಕಾಯ್ದೆ ವಾಪಸ್ ಪಡೆದುಕೊಂಡಿದ್ದಾರೆ. ಏಳನೂರು ಜನ ರೈತರು ಸಾವನ್ನಪ್ಪಿದ್ರೂ ಇದಕ್ಕೆ ಕಾರಣ ಮಿಸ್ಟರ್ ಮೋದಿ. ರೈತರ ಬಗ್ಗೆ ಇವರಿಗೆ ಕಾಳಜಿ ಇದೆಯಾ, ರೈತರ ಬಗ್ಗೆ ಮಾತನಾಡುಲು ಇವರಿಗೆ ಯಾವ ನೈತಿಕತೆ ಇದೆ. ಮೂರು ಕಾಸಿನ ಮಾನ ಮರ್ಯಾದೆ ಇಲ್ಲ ಇವರಿಗೆ. ನಾನು ಕೊಟ್ಟ ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್, ಶಾದಿ ಭಾಗ್ಯ ನಿಲ್ಲಿಸಿದರು ಎಂದು ಸಿದ್ದರಾಮಯ್ಯ ಕಿಡಿಕಾರಿದರು.

Comments

Leave a Reply

Your email address will not be published. Required fields are marked *