ಶ್ರೀಗಳು ಲಿಂಗೈಕ್ಯ-ಸಂತಾಪ ಸೂಚಿಸಿದ ಮೋದಿ, ರಾಹುಲ್ ಗಾಂಧಿ

ಬೆಂಗಳೂರು: ನಡೆದಾಡುವ ದೇವರು, ಅಕ್ಷರ ದಾಸೋಹಿ, ಆಧುನಿಕ ಬಸವಣ್ಣ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಇಂದು ಬೆಳಗ್ಗೆ 11.44ಕ್ಕೆ ಲಿಂಗೈಕ್ಯರಾಗಿದ್ದಾರೆ. ಇಡೀ ಕರುನಾಡು ಸ್ತಬ್ಧವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಎಲ್ಲ ನಾಯಕರು ಸಂತಾಪ ಸೂಚಿಸಿದ್ದಾರೆ.

ಸಾಲು ಸಾಲು ಟ್ವೀಟ್ ಮಾಡಿರುವ ಪ್ರಧಾನಿಗಳು, ಶ್ರೀಗಳ ಜೊತೆಗಿನ ಕೆಲ ಫೋಟೋಗಳನ್ನು ಹಾಕಿಕೊಂಡು ಸಂತಾಪ ಸೂಚಿಸಿದ್ದಾರೆ. ಜನರಿಗಾಗಿ ಅದರಲ್ಲಿಯೂ ಬಡವರಿಗಾಗಿ ಬದುಕಿದವರು ಶ್ರೀಗಳು. ಬಡತನ ನಿರ್ಮೂಲನೆ, ಅನ್ನ ದಾಸೋಹ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನ್ನವನ್ನು ಮೀಸಲಿಟ್ಟ ಚೇತನ. ಅಕ್ಷರ ದಾನಕ್ಕಾಗಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿದವರು. ದೇಶದ ಸಂಸ್ಕೃತಿ ಪ್ರತೀಕರಾಗಿದ್ದರು. ಆಧ್ಯಾತ್ಮದ ಜೊತೆಗೆ ಮಾನವೀಯ ಮೌಲ್ಯಗಳನ್ನು ಪ್ರತಿರೂಪ ಸಿದ್ದಗಂಗಾ ಶ್ರೀಗಳು. ಸಮಾಜಕ್ಕೆ ಶ್ರೀಗಳು ನೀಡಿದ ಕೊಡುಗೆ ಅಪಾರ. ಈ ಹಿಂದೆ ನಾನು ಸಹ ಶ್ರೀಗಳನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದ ನಾನು ಧನ್ಯ ಎಂದು ಮೋದಿ ಅವರು ಬರೆದುಕೊಂಡಿದ್ದಾರೆ.

ಇತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಿದ್ದಗಂಗಾ ಮಠದ ಸ್ಥಾಪಕರಾದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ವಿಷಯ ಕೇಳಿ ದುಃಖವಾಯ್ತು. ಎಲ್ಲ ಸಮುದಾಯ ಮತ್ತು ಲಕ್ಷಾಂತರ ಭಾರತೀಯರ ಆರಾಧ್ಯದೈವ. ಶ್ರೀಗಳನ್ನು ನಮ್ಮನ್ನು ಅಗಲಿದ್ರೂ ಅವರ ತತ್ವ ಸಿದ್ಧಾಂತಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಶ್ರೀಗಳ ಎಲ್ಲ ಭಕ್ತರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

ನಾಳೆ ಬೆಳಗ್ಗೆ ಪ್ರಧಾನಿಗಳು ಸಿದ್ದಗಂಗಾ ಶ್ರೀಗಳ ದರ್ಶನ ಪಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *