ಗುಜರಾತ್‌ ಕರಾವಳಿಯಲ್ಲಿ ಭರ್ಜರಿ ಬೇಟೆ – 1,800 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

ಗಾಂಧಿನಗರ: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಮತ್ತು ಭಾರತೀಯ ಕೋಸ್ಟ್ ಗಾರ್ಡ್ (ICG) ಜಂಟಿ ಕಾರ್ಯಾಚರಣೆಯಲ್ಲಿ, ಗುಜರಾತ್ ಕರಾವಳಿಯ ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆಯ ಬಳಿ 1,800 ಕೋಟಿ ರೂ. ಮೌಲ್ಯದ 300 ಕೆಜಿ ಮೆಥಾಂಫೆಟಮೈನ್ ಡ್ರಗ್ಸ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಜರಾತ್ ಎಟಿಎಸ್ ಹಿರಿಯ ಅಧಿಕಾರಿಯೊಬ್ಬರು (ATS official) ತಿಳಿಸಿದ್ದಾರೆ.

ಭಾರೀ ಪ್ರಮಾಣದ ಸರಕು ಪತ್ತೆಯಾಗಿದೆ, ಆದ್ರೆ ಕಳ್ಳಸಾಗಣೆದಾರರು ಎಸ್ಕೇಪ್‌ ಆಗಲು ಪಾಕಿಸ್ತಾನ ಜಲ ಪ್ರದೇಶಕ್ಕೆ (Pakistani waters boundary) ಪಲಾಯನ ಮಾಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರ ʻಡ್ರಗ್‌ ಮುಕ್ತ ಭಾರತʼ ನಿರ್ಮಾಣ ಮಾಡುವ ದೃಷ್ಟಿಯಿಂದ ದೇಶಾದ್ಯಂತ ಕರೆ ನೀಡಿದೆ. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ಡ್ರಗ್‌ ದಂಧೆಯನ್ನು ಭೇದಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

ಕಳೆದ ವಾರ ಅಸ್ಸಾಂನಲ್ಲಿ 24.32 ಕೋಟಿ ಮೌಲ್ಯದ 30.4 ಕೆಜಿ ಮೆಥಾಂಫೆಟಮೈನ್ ಡ್ರಗ್ಸ್‌ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಡ್ರಗ್ಸ್‌ ವಿರುದ್ಧ ಕಾರ್ಯಾಚರಣೆಗೆ ಕರೆ ನೀಡಿದ್ದರು. ಕೇಂದ್ರ ಸರ್ಕಾರದ ಪ್ರಕಾರ 2024ರ ವರ್ಷದಲ್ಲಿ ದೇಶಾದ್ಯಂತ ವಿವಿಧ ಎನ್‌ಸಿಬಿ ಮತ್ತು ಪೊಲೀಸ್‌ ಪಡೆಗಳು 16,914 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡಿವೆ ಎಂದು ತಿಳಿದುಬಂದಿದೆ.

ಇನ್ನೂ 2004 ರಿಂದ 2014ರ ವರೆಗೆ 3.63 ಲಕ್ಷ ಕೆಜಿಯಷ್ಟು ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದ್ರೆ 2014 ರಿಂದ 2024ವರೆಗಿನ ಅವಧಿಯಲ್ಲಿ 24 ಲಕ್ಷ ಕೆಜಿ ಅಂದ್ರೆ ಹಿಂದಿನ ಸರ್ಕಾರದ ಅವಧಿಗಿಂತ 7 ಪಟ್ಟು ಹೆಚ್ಚು ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ, ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.