ಭಾರತ್ ಬಂದ್ ಮಾಡಿದ್ದು ರೈತರಲ್ಲ, ಮಧ್ಯವರ್ತಿಗಳು: ನಾರಾಯಣಗೌಡ

ಶಿವಮೊಗ್ಗ: ಹೊಸ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಅನುಕೂಲವೇ ಹೊರತು, ನಷ್ಟವಿಲ್ಲ. ಭಾರತ್ ಬಂದ್ ಆಚರಣೆ ರೈತರು ಮಾಡುತ್ತಿರುವುದಲ್ಲ, ರೈತರ ಹೆಸರಿನಲ್ಲಿ ಮಧ್ಯವರ್ತಿಗಳು ಬಂದ್‍ಗೆ ಮುಂದಾಗಿದ್ದಾರೆ ಎಂದು ಕ್ರೀಡಾ ಹಾಗು ರೇಷ್ಮೆ ಸಚಿವ ನಾರಾಯಣಗೌಡ ತಿಳಿಸಿದರು.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡಿದ್ದಾರೆ. ಮೋದಿಯವರ ಆಡಳಿತಾವಧಿಯಲ್ಲಿ ರೈತರ ಬೆಳೆಗಳಿಗೆ ಬೆಲೆ ಏರಿಕೆ ಸಹ ಆಗಿದೆ. ಆದರೆ ರಾಜಕಾರಣ ಮಾಡುವ ಸಲುವಾಗಿ ದೆಹಲಿಯಲ್ಲಿ ಕಳೆದ 10 ತಿಂಗಳಿನಿಂದ ರೈತರ ಹೆಸರಿನಲ್ಲಿ ಕೆಲವರು ಧರಣಿ ನಡೆಸುತ್ತಿದ್ದಾರೆ. ವರ್ಷಗಳ ಕಾಲ ಧರಣಿ, ಪ್ರತಿಭಟನೆ ನಡೆಸಲು ರೈತರಿಂದ ಸಾಧ್ಯನಾ..? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಾನಿರುವಾಗ ಪೊಲೀಸರು, ಕೋರ್ಟ್‍ಗೆ ಹೆದರಬೇಡಿ: ತ್ರಿಪುರಾ ಸಿಎಂ

ನೂತನ ಎಪಿಎಂಸಿ ಕಾಯ್ದೆಯಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಸುಧಾರಣೆ ಆಗಿದೆ. ಎಪಿಎಂಸಿ ಕಾಯ್ದೆಯಿಂದ ಮಧ್ಯವರ್ತಿಗಳಿಗೆ ತೊಂದರೆ ಆಗುತ್ತಿದ್ದು, ಆದರೆ ರೈತರಿಗೆ ಲಾಭವಾಗುತ್ತಿದೆ. ಈ ಮೊದಲು ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಯಲ್ಲಿ ಮಾತ್ರ ಮಾರಾಟ ಮಾಡಬೇಕಿತ್ತು. ಆದರೆ ಈ ಹೊಸ ಕಾಯ್ದೆಯಿಂದ ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದಾಗಿದೆ. ಆದರೆ ಈ ಹಿಂದೆ ಇಂತಹ ವ್ಯವಸ್ಥೆ ಇರಲಿಲ್ಲ. ಬಿಜೆಪಿ ಸರ್ಕಾರ ರೈತರ ಪರವಾದ ಸರಕಾರವಾಗಿದ್ದು, ರೈತರಿಗೆ ಯಾವುದೇ ಕಾರಣಕ್ಕು ತೊಂದರೆ ಆಗುವ ಕೆಲಸವನ್ನು ನಮ್ಮ ಸರ್ಕಾರ ಮಾಡುವುದಿಲ್ಲ ಎಂದು ಸಚಿವ ನಾರಾಯಣಗೌಡ ತಿಳಿಸಿದರು.

Comments

Leave a Reply

Your email address will not be published. Required fields are marked *