ಮೈಸೂರು ವಿವಿ ಕ್ಯಾಂಪಸ್‍ನಲ್ಲೂ ಪ್ರತ್ಯೇಕ ಕಾಶ್ಮೀರ ಕೂಗು

ಮೈಸೂರು: ಇಲ್ಲಿನ ವಿಶ್ವವಿದ್ಯಾನಿಲಯ ಮತ್ತೊಂದು ಜೆಎನ್‍ಯು ಆಗಲಿದೆಯಾ? ಇಂತಹದೊಂದು ಪ್ರಶ್ನೆ ಈಗ ಕಾಡುತ್ತಿದೆ. ಕಾರಣ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ಮೈಸೂರು ವಿವಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನಾ ಮೆರವಣಿಗೆ ವೇಳೆ ಫ್ರೀ ಕಾಶ್ಮೀರ್ ಪೋಸ್ಟರ್ ಗಳು ರಾರಾಜಿಸಿವೆ.

ಜೆಎನ್‍ಯುನಲ್ಲಿ ನಡೆದ ಹಲ್ಲೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಕಾಶ್ಮೀರ ಪ್ರತ್ಯೇಕತೆ ಬಗ್ಗೆ ವಿದ್ಯಾರ್ಥಿಗಳು ದನಿ ಎತ್ತಿದ್ದಾರೆ. ಪ್ರತಿಭಟನೆಯ ಮೂಲ ಉದ್ದೇಶ ಬಿಟ್ಟು ಫ್ರೀ ಕಾಶ್ಮೀರ್ ಬಗ್ಗೆ ವಿದ್ಯಾರ್ಥಿಗಳಿಂದ ಪೋಸ್ಟರ್ ಪ್ರದರ್ಶನದ ಹಿಂದೆ ಯಾರ ಕೈವಾಡವಿದೆ ಎಂಬ ಪ್ರಶ್ನೆ ಎದುರಾಗಿದೆ. ಮೈಸೂರು ವಿವಿಯ ವಿದ್ಯಾರ್ಥಿಗಳು ಜೆಎನ್‍ಯು ಮಾದರಿ ಅನುಸರಿಸುವುದಕ್ಕೆ ಮುಂದಾಗಿದ್ದಾರಾ ಎಂಬ ಪ್ರಶ್ನೆ ಕೂಡ ಮೂಡಿಸಿದೆ.

ಜೆಎನ್‍ಯು ವಿವಿಯ ವಿದ್ಯಾರ್ಥಿಗಳ ಮೇಲಿನ ಖಂಡಿಸಿ ಎಬಿವಿಪಿ ವಿರುದ್ಧ ಪಂಜಿನ ಮೆರವಣಿಗೆ ನಡೆಸಲಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿಗಳ ಒಕ್ಕೂಟ, ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ ಬಹುಜನ ವಿದ್ಯಾರ್ಥಿ ಸಂಘದಿಂದ ಈ ಪ್ರತಿಭಟನಾ ಮೆರವಣಿಗೆ ನಡೆದಿತ್ತು. ಎಬಿವಿಪಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಮೈಸೂರು ವಿವಿ ಮಾನಸಗಂಗೋತ್ರಿಯ ಕ್ಲಾಕ್ ಟವರ್ ಬಳಿಯಿಂದ ಕುವೆಂಪು ಪ್ರತಿಮೆವರೆಗೆ ಪಂಜಿನ ಮೆರವಣಿಗೆ ನಡೆಯಿತು. ವಿವಿಗೆ ನುಗ್ಗಿ ದಾಂಧಲೆ ನಡೆಸಲಾಗಿದೆ. ಜೆಎನ್‍ಯು ವಿದ್ಯಾರ್ಥಿಗಳಲ್ಲದೇ ಉಪಧ್ಯಾಯರ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದರು. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಈ ಕೂಗಿನ ನಡುವೆ ಫ್ರೀ ಕಾಶ್ಮೀರ ಪೋಸ್ಟರ್ ಗಳನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪ್ರದರ್ಶಿಸಿರೋದು ಈಗ ಚರ್ಚೆಗೆ ಗ್ರಾಸವಾಗಿದೆ.

Comments

Leave a Reply

Your email address will not be published. Required fields are marked *