ಬಿಜೆಪಿ ವಕ್ತಾರನಾಗಿದ್ದೇ ರಂಗಾಯಣ ನಿರ್ದೇಶಕನಾಗಲೂ ಕಾರಣ ಇರಬಹುದು: ಅಡ್ಡಂಡ ಕಾರ್ಯಪ್ಪ

ಮೈಸೂರು: ಮೈಸೂರಿನ ರಂಗಾಯಣ ಸಂಸ್ಥೆಯ ನೂತನ ನಿರ್ದೇಶಕರಾಗಿ ನಾಡಿನ ಹಿರಿಯ ರಂಗಕರ್ಮಿ ಹಾಗೂ ಸಾಹಿತಿ ಅಡ್ಡಂಡ ಕಾರ್ಯಪ್ಪ ಇಂದು ಮೈಸೂರಿನ ಕಲಾಮಂದಿರದ ರಂಗಾಯಣದ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

ಕೊಡಗು ಮೂಲದ ಹಿರಿಯ ರಂಗಕರ್ಮಿ ಹಾಗೂ ಸಾಹಿತಿಯಾಗಿರುವ ಅಡ್ಡಂಡ ಕಾರ್ಯಪ್ಪ, ಕಳೆದ ಮೂರು ತಿಂಗಳಿನಿಂದ ಖಾಲಿ ಇದ್ದ ರಂಗಾಯಣದ ನಿರ್ದೇಶಕ ಹುದ್ದೆ ಅಲಂಕರಿಸಿದರು. ಅಧಿಕಾರ ಸ್ವೀಕಾರ ಮಾಡಿದ ವೇಳೆ ಹಿರಿಯ ರಂಗಕರ್ಮಿಗಳು ಹಾಗೂ ರಂಗಾಯಣದ ಕಲಾವಿದರು ಪುಷ್ಪಗುಚ್ಚ ನೀಡಿ ಶುಭ ಹಾರೈಸಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಡ್ಡಂಡ ಕಾರ್ಯಪ್ಪ, ರಂಗಾಯಣದ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡಿದ್ದು ಸಂತಸ ತಂದಿದೆ. ರಂಗಾಯಣದ ಏಳಿಗೆಗಾಗಿ ಸಾಕಷ್ಟು ಕನಸುಗಳನ್ನು ಕಂಡಿದ್ದೇನೆ. ಹಿರಿಯ ರಂಗಕರ್ಮಿ ಬಿ. ವಿ ಕಾರಂತರು ಸ್ಥಾಪಿಸಿರುವ ರಂಗಾಯಣವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ. ಪ್ರತಿವರ್ಷ ಸಂಕ್ರಾತಿಯ ದಿನ ಆರಂಭವಾಗುತ್ತಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಈ ಬಾರಿ ಮುಂದೂಡಿಕೆ ಆಗಲಿದೆ. ನಿಧಾನವಾಗಿಯಾದರೂ ಪ್ರಧಾನವಾಗಿ ಬಹುರೂಪಿ ನಾಟಕೋತ್ಸವನ್ನು ಆಯೋಜನೆ ಮಾಡುತ್ತೇವೆ ಎಂದರು.

ಸಾಂಸ್ಕೃತಿಕ ಸಂಸ್ಥೆಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡುವ ಸರ್ಕಾರಗಳು, ನಿರ್ದೇಶಕರು ಅಧಿಕಾರವನ್ನು ಪೂರೈಸಲು ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ನೀಡಿರುವ ವರದಿಯನ್ನು ಪರಿಗಣಿಸಬೇಕು. ಸರ್ಕಾರಗಳು ಬದಲಾದಾಗ ಸಾಂಸ್ಕೃತಿಕ ಸಂಸ್ಥೆಗಳ ನಿರ್ದೇಶಕರನ್ನು ಬದಲಾವಣೆ ಮಾಡುವುದು ಸರಿಯಾದ ಕ್ರಮವಲ್ಲ. ಇದರಿಂದ ಸಂಬಂಧಪಟ್ಟ ಸಾಂಸ್ಕೃತಿಕ ಸಂಸ್ಥೆಯ ಮೇಲೂ ಪರಿಣಾಮ ಬೀರುತ್ತದೆಯಲ್ಲದೆ ಅದರ ಚಟುವಟಿಕೆಗಳಿಗೆ ಹಿನ್ನಡೆ ಆಗುತ್ತದೆ. ಯಾವುದೇ ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕರನ್ನು ಮೂರು ವರ್ಷ ಪೂರ್ತಿ ಅಧಿಕಾರ ಪೂರೈಸಲು ಅನುವು ಮಾಡಿಕೊಡಬೇಕು ಎಂದು ಹೇಳಿದರು.

ರಂಗಾಯಣದ ನಿರ್ದೇಶಕರಾಗಿರುವುದಕ್ಕೆ ನಾನು ಬಿಜೆಪಿ ವಕ್ತಾರನಾಗಿದ್ದು ಕಾರಣವಾಗಿರಲೂಬಹುದು. ನಾನು ರಂಗಾಯಣದ ನಿರ್ದೇಶಕನಾಗಬೇಕೆಂದು ಪ್ರಯತ್ನ ಪಟ್ಟಿದ್ದೆ. ಆದರೆ ಈ ಹುದ್ದೆ ನಿರೀಕ್ಷೆಯಲ್ಲಿ ಇರಲಿಲ್ಲ. ಆದರೂ ಕೂಡ ಸರ್ಕಾರ ನನ್ನ ಮೇಲೆ ನಂಬಿಕೆಯಿಟ್ಟು ಈ ಹುದ್ದೆ ನೀಡಿದೆ. ನನಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

Comments

Leave a Reply

Your email address will not be published. Required fields are marked *