ಅಮ್ಮನ ತೀರ್ಥಯಾತ್ರೆ ಆಸೆ-ಸ್ಕೂಟರ್‌ನಲ್ಲೇ ಜೀವ ತುಂಬಿದ ಆಧುನಿಕ ಶ್ರವಣಕುಮಾರ

ಧಾರವಾಡ: ತಂದೆ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ತೀರ್ಥ ಯಾತ್ರೆ ಮಾಡಿದ ಶ್ರವಣಕುಮಾರ ಬಗ್ಗೆ ನಾವು ಕೇಳಿದ್ದೆವೆ. ಆದರೆ ಇಂದಿನ ಕಾಲದಲ್ಲಿ ಅಂತಹ ಮಕ್ಕಳು ಇಲ್ಲ ಎನ್ನುವರೇ ಹೆಚ್ಚು. ಆದರೆ ಇಲ್ಲೊಬ್ಬರು ತಮ್ಮ ತಾಯಿಯ ಆಸೆ ಪೂರ್ಣಗೊಳಿಸಲು ಸ್ಕೂಟರ್ ಮೇಲೆಯೇ ತೀರ್ಥ ಯಾತ್ರೆ ನಡೆಸಿದ್ದಾರೆ.

ಹೌದು, ಮೂಲತಃ ಮೈಸೂರಿನವರಾದ ಡಿ ಕೃಷ್ಣಕುಮಾರ ಸದ್ಯ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ತಾಯಿ ಚುಡರತ್ನ ಅವರ ಆಸೆಯಂತೆ ತೀರ್ಥಯಾತ್ರೆ ಮಾಡುತ್ತಿದ್ದಾರೆ. ದಕ್ಷಿಣ ಭಾರತದ 6 ರಾಜ್ಯಗಳ ಪ್ರವಾಸ ಮುಗಿಸಿದ್ದು, ಇಂದು ಧಾರವಾಡಕ್ಕೆ ಆಗಮಿಸಿದ್ದರು.

ತಂದೆ ಸ್ಕೂಟರ್ ಮೇಲೆಯೇ ಸವಾರಿ: ವಿಶೇಷ ಎಂದರೆ ಕೃಷ್ಣಕುಮಾರ್ ಅವರು ತಂದೆಯ ಬಜಾಜ್ ಚೇತಕ್ ಸ್ಕೂಟರ್ ನಲ್ಲೇ ತೀರ್ಥಯಾತ್ರೆ ನಡೆಸಿದ್ದು, ಇಬ್ಬರು ಸದ್ಯ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಇವರಿಗೆ 20 ವರ್ಷಗಳ ಹಳೆಯ ಬಜಾಜ್ ಚೇತಕ್ ಸ್ಕೂಟರ್ ಕೂಡ ಇವರಿಗೆ ಸಾಥ್ ನೀಡಿದೆ.

ತಂದೆ ಇದ್ದಾಗ ಈ ಪ್ರವಾಸ ಮಾಡಲು ಆಗಲಿಲ್ಲ, ಆದರೆ ತಂದೆ ನಿಧನ ಬಳಿಕ ತಾಯಿಯ ಇಚ್ಛೆಯಂತೆ ಯಾತ್ರೆ ಆರಂಭ ಮಾಡಿದ್ದೇನೆ ಎಂದು ಕೃಷ್ಣಕುಮಾರ್ ತಿಳಿಸಿದ್ದಾರೆ. ಜನವರಿ 16 ರಿಂದ ಆರಂಭವಾಗಿರುವ ಇವರ ತೀರ್ಥಯಾತ್ರೆ ಬೆಂಗಳೂರಿನಲ್ಲಿ ಮುಕ್ತಾಯವಾಗಲಿದೆ. ಧಾರವಾಡದಿಂದ ಬೆಂಗಳೂರಿಗೆ ಪ್ರಯಾಣ ಮುಂದುವರಿಸಿರುವ ಇವರು ಹಲವು ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ಇನ್ನು ಪ್ರಯಾಣ ವೇಳೆ ಹಣ್ಣು ಹಂಪಲು ಸೇವಿಸುವ ಇವರು ದೇವಾಲಯ, ಮಠಗಳಲ್ಲಿ ನೀಡುವ ದೇವರ ಪ್ರಸಾದವನ್ನು ಸೇವಿಸುತ್ತಾ ಪ್ರಯಾಣ ಬೆಳೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *