ಬಜೆಟ್‍ನಲ್ಲಿ ಚಾಮುಂಡಿಗೆ ಚಿನ್ನದ ರಥ ಘೋಷಣೆ ಸಾಧ್ಯತೆ: ಸಚಿವ ಸೋಮಣ್ಣ

– ನೆರೆ ಸಂತ್ರಸ್ತರಿಗೆ ಮನೆ ವಿತರಣೆ ವಿಚಾರಕ್ಕೆ ಸಚಿವರ ಪ್ರತಿಕ್ರಿಯೆ
– ಕೃಷ್ಣನ ಲೆಕ್ಕ ಹೋಗಿ ರಾಮನ ಲೆಕ್ಕ ಮಾತ್ರ ಉಳಿದಿದೆ

ಮೈಸೂರು: ಚಾಮುಂಡಿಬೆಟ್ಟದ ಚಾಮುಂಡಿ ತಾಯಿಗೆ ಚಿನ್ನದ ರಥ ನಿರ್ಮಾಣ ವಿಚಾರ ಈ ಬಾರಿಯ ಬಜೆಟ್‍ನಲ್ಲಿ ನಿರ್ಧಾರವಾಗುವ ವಿಶ್ವಾಸ ಇದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರೊಂದಿಗೆ ಮಾತನಾಡಿದ್ದೇನೆ. ಚಿನ್ನದ ರಥ ನಿರ್ಮಾಣ ಮಾಡುವುದಕ್ಕೆ ಬಜೆಟ್‍ನಲ್ಲಿ ಅನುದಾನ ಕೊಡಿಸುವ ಭರವಸೆಯನ್ನು ಅವರು ನೀಡಿದ್ದಾರೆ. ಸಪ್ತಪದಿ ಯೋಜನೆ ಅನುಷ್ಠಾನಕ್ಕೂ ನಮ್ಮ ಸರ್ಕಾರ ಸಿದ್ಧವಾಗಿದೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಯೋಜನೆ ಅನುಷ್ಠಾನಕ್ಕೆ ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದರು.

ಇನ್ನೊಂದು ತಿಂಗಳಲ್ಲಿ ಚಾಮುಂಡಿಬೆಟ್ಟ ಕಾಮಗಾರಿ ಪೂರ್ಣವಾಗಲಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿ ಮಳಿಗೆ ನೀಡುತ್ತೇವೆ. ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ವ್ಯವಸ್ಥೆ ಮಾಡುತ್ತೇವೆ. ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿ ಶ್ರಮ ಹಾಕಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯದ ನೆರೆ ಸಂತ್ರಸ್ತರಿಗೆ ಮನೆ ವಿತರಣೆ ವಿಚಾರದಲ್ಲಿ ಕೃಷ್ಣನ ಲೆಕ್ಕ ಹೋಗಿ ರಾಮನ ಲೆಕ್ಕ ಮಾತ್ರ ಉಳಿದಿದೆ. ರಾಜ್ಯದಲ್ಲಿ 3.5. ಲಕ್ಷ ಮನೆ ವಿತರಣೆಗೆ ಎಲ್ಲ ಸಿದ್ಧತೆ ನಡೆದಿದೆ. ಮೊದಲ ಹಂತದಲ್ಲಿ 15 ಲಕ್ಷ ಮನೆಗಳ ವಿತರಣೆ ಅರ್ಜಿ ಬಂದಿತ್ತು. ಆಧಾರ್, ಬಿಪಿಎಲ್, ಎಪಿಎಲ್ ಕಾರ್ಡುಗಳನ್ನ ಲಿಂಕ್ ಮಾಡಿದ್ವಿ. ಆ ನಂತರ 15 ಲಕ್ಷದಿಂದ 6 ಲಕ್ಷಕ್ಕೆ ಬಂತು. ಇದೀಗ 3.5 ಲಕ್ಷ ನಿಜವಾದ ಸಂತ್ರಸ್ತರಿಗೆ ಮನೆ ವಿತರಣೆ ಸಿದ್ಧತೆ ನಡೆದಿದೆ. ಜೂನ್ ಅಂತ್ಯದ ಒಳಗೆ ಎಲ್ಲರಿಗೂ ಮನೆ ವಿತರಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಕಾಮಗಾರಿ ಪರಿಶೀಲನೆ:
ಸಚಿವ ವಿ.ಸೋಮಣ್ಣ ಅವರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಚಾಮುಂಡಿಬೆಟ್ಟದಲ್ಲಿ ಜಿಲ್ಲಾಡಳಿತ ನಿರ್ಮಾಣ ಮಾಡುತ್ತಿರುವ ಅಂಗಡಿ ಮಳಿಗೆ ಕಾಮಗಾರಿ ಪರಿಶೀಲನೆ ಮಾಡಿದರು. ಬಹುಮಹಡಿ ಪಾರ್ಕಿಂಗ್ ಸಮೀಪದಲ್ಲೇ ಸಾಮೂಹಿಕ ಅಂಗಡಿ ಮಳಿಗೆ ನಿರ್ಮಾಣವಾಗುತ್ತಿದ್ದು, ಈ ಕಾಮಗಾರಿ ತುರ್ತಾಗಿ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು. ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಪಾಲಿಕೆ ಆಯುಕ್ತರ ಸಮ್ಮುಖದಲ್ಲಿ ಈ ಪರಿಶೀಲನೆ ನಡೆಯಿತು. ಇನ್ನೊಂದು ತಿಂಗಳಲ್ಲಿ ಕೆಲಸ ಮುಗಿಸುವಂತೆ ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *