ಮೈಸೂರು: ಮೈತ್ರಿ ಸರ್ಕಾರ ಕೆಡವಿದ ವಿವರವು ಪುಸ್ತಕ ರೂಪದಲ್ಲಿ ಬರಲಿದೆ. ಮಾಜಿ ಸಚಿವ ಎಚ್. ವಿಶ್ವನಾಥ್ ಈ ಪುಸ್ತಕ ಬರೆಯುತ್ತಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಎಚ್. ವಿಶ್ವನಾಥ್ ಈ ವಿಷಯ ತಿಳಿಸಿದರು. ಸರ್ಕಾರ ಬೀಳಿಸುವುದಕ್ಕೆ ಯಾರು ಯಾರು ಸಹಾಯ ಮಾಡಿದರು. ಮಾಜಿ ಸಿಎಂ ಆಗಿದ್ದವರು, ಮಾಜಿ ಮಂತ್ರಿ ಆಗಿದ್ದವರು ಹೇಗೆಲ್ಲ ಇದರಲ್ಲಿ ಪಾತ್ರವಹಿಸಿದರು ಎಂಬ ಎಲ್ಲಾ ಮಾಹಿತಿಗಳನ್ನು ಬಯಲು ಮಾಡುತ್ತೇನೆ ಎಂದರು.

ನಾನು ಇದ್ದದ್ದನ್ನು ಇದ್ದ ಹಾಗೇ ಹೇಳುವ ಮನುಷ್ಯ. ಈಗ ಬರೆಯುತ್ತಿರುವ ಪುಸ್ತಕದಲ್ಲಿ ಸತ್ಯ ದಾಖಲಾಗುತ್ತದೆ. ಎರಡು ತಿಂಗಳಲ್ಲಿ ಪುಸ್ತಕ ಬಿಡುಗಡೆ ಆಗಲಿದೆ. ಸರ್ಕಾರ ಪತನ ಜನ ಅಂದು ಕೊಂಡ ರೀತಿ ಏಕ ಪಾತ್ರ ಅಭಿನಯ ಅಲ್ಲ. ಅದರಲ್ಲಿ ಬಹಳಷ್ಟು ಪಾತ್ರ ಬರುತ್ತವೆ. ಮೇಲ್ನೋಟಕ್ಕೆ ನನಗೆ ಏನೂ ಗೊತ್ತಿಲ್ಲ ಅಂದವರ ಬಣ್ಣವೂ ಇಲ್ಲಿ ಬಯಲಾಗುತ್ತದೆ. ಎಲ್ಲವನ್ನೂ ನೋಟ್ ಮಾಡಿಕೊಂಡಿದ್ದೇನೆ. ನೋಟ್ ಮುಗಿದ ಮೇಲೆ ಬರಹ ಶುರುವಾಗುತ್ತೆ. ಎರಡು ತಿಂಗಳಲ್ಲಿ ಪುಸ್ತಕ ಹೊರ ಬರುತ್ತೆ ಎಂದು ತಿಳಿಸಿದರು.

ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿ, ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ. ರಾಜಕಾರಣ ನಂಬಿಕೆ, ಆತ್ಮವಿಶ್ವಾಸ, ಆಶಾವಾದದ ಮೇಲೆಯೇ ನಡೆಯಬೇಕು. ನಾನು ಈಗಲೂ ಆಶಾವಾದ ಹೊಂದಿದ್ದೇನೆ. ಸಚಿವ ಸ್ಥಾನ ಸಿಗುವ ನಿರೀಕ್ಷೆ ಹೊಂದಿದ್ದೇನೆ. ಯಡಿಯೂರಪ್ಪ ದೆಹಲಿಗೆ ಹೋಗಿ ಬಂದಿದ್ದಾರೆ. ಯಾರ ಹೆಸರುಗಳು ಇವೆ, ಯಾರು ಇಲ್ಲ ಎಂಬುದು ಯಾರಿಗೂ ಗೊತ್ತಿಲ್ಲ. ಏನಾಗುತ್ತೋ ಕಾದು ನೋಡೋಣ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply