ಮೈಸೂರು: ಸಿಎಂ ಸಿದ್ದರಾಮಯ್ಯ ತವರಿನಲ್ಲಿ ಮಾನವ ಕುಲವೇ ತಲೆ ತಗ್ಗಿಸುವ ಅನಿಷ್ಠ ಪದ್ದತಿ ಇನ್ನು ಜೀವಂತವಾಗಿದೆ. ಶೌಚಗುಂಡಿಗೆ ಪೌರಕಾರ್ಮಿಕರೊಬ್ಬರನ್ನು ಇಳಿಸಿ ಗುಂಡಿ ಸ್ವಚ್ಛಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ತಾವರೆಕಟ್ಟೆ ಗ್ರಾಮದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಎಂಬುವರು ಪೌರಕಾರ್ಮಿಕ ಗಣೇಶ್ ಅವರನ್ನ ಕರೆದು ತಮ್ಮ ಮನೆ ಮುಂದೆ ಇದ್ದ ಮ್ಯಾನ್ ಹೋಲ್ ಸ್ವಚ್ಛಗೊಳಿಸುವಂತೆ ಹೇಳಿದ್ದಾರೆ.
ಮ್ಯಾನ್ ಹೋಲ್ ತೆರೆದು ನೋಡಿದ ಗಣೇಶ್ ಸಂಪೂರ್ಣ ಭರ್ತಿಯಾಗಿರುವುದನ್ನ ನೋಡಿ, ಇದನ್ನ ಸ್ವಚ್ಛಗೊಳಿಸಲು ಯಂತ್ರ ಬೇಕು ಎಂದು ಹೇಳಿದ್ದಾರೆ. ಯಾವುದೇ ಯಂತ್ರ ನೀಡದ ಗೀತಾ ಬೆಟ್ಟದ ಪಿಡಿಓ ಆನಂದ್ ಅವರಿಂದ ಫೋನ್ ಮಾಡಿಸಿ ಒಳಗೆ ಇಳಿದು ಸ್ವಚ್ಛಗೊಳಿಸಲು ತಾಕೀತು ಮಾಡಿಸಿದ್ದಾರೆ. ಇಲ್ಲವಾದಲ್ಲಿ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಿದ್ದಾರೆ. ನಂತರ ಒತ್ತಡಕ್ಕೆ ಮಣಿದ ಗಣೇಶ್ ಯಾವುದೇ ರಕ್ಷಾ ಕವಚ ಇಲ್ಲದೆ ಶೌಚಗುಂಡಿಗೆ ಇಳಿದು ಸ್ವಚ್ಛ ಮಾಡಿದ್ದಾರೆ.
ಮ್ಯಾನ್ ಹೋಲ್ ನಲ್ಲಿ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ ಪ್ರಕರಣವೊಂದರ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ಇದೊಂದು ಅನಿಷ್ಟ ಪದ್ದತಿ ಇಂತಹ ಪ್ರಕರಣಗಳು ಮತ್ತೆ ಮರುಕಳಿಸಬಾರದು ಅಂತ ಎಲ್ಲ ರಾಜ್ಯ ಸರ್ಕಾರಗಳಿಗೆ 2014 ಮೇ 26 ರಂದು ಕಟ್ಟುನಿಟ್ಟಿನ ಆದೇಶ ನೀಡಿದೆ. ಆದರೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ತವರಲ್ಲೇ ಈ ಆದೇಶ ಕಾಲು ಕಸದಂತಾಗಿದ್ದು, ಈ ಬಗ್ಗೆ ಅಧಿಕಾರಿಗಳು ಸಹ ಮೌನ ವಹಿಸಿದ್ದಾರೆ.
ಈ ಘಟನೆಗೆ ಇಡೀ ಪೌರಕಾರ್ಮಿಕರ ಸಂಘ ಖಂಡನೆ ವ್ಯಕ್ತಪಡಿಸಿದ್ದು, ಈ ಕೂಡಲೇ ಘಟನೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು. ಅಧಿಕಾರಿ ಹಾಗೂ ಜನಪ್ರತಿನಿಧಿಗಳನ್ನ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ. ಪಬ್ಲಿಕ್ ಟಿವಿ ಯಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಪಡೆದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಸದಸ್ಯತ್ವ ರದ್ದಾಗಿದ್ದು, ಕ್ರಿಮಿನಲ್ ಕೇಸ್ ದಾಖಲಾಗಿದೆ.
https://www.youtube.com/watch?v=kcFSaXt6CH8







Leave a Reply