ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ, ವೀಕ್ಷಣೆಗೆ ಮುಕ್ತ

-ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ ಮೈಸೂರು

ಮೈಸೂರು: ಹೊಸ ವರ್ಷದ ಮೊದಲ ದಿನ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ.

ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಕಾರಂಜಿಕೆರೆ ಪ್ರಾಕೃತಿಕ ಉದ್ಯಾನವನ, ಚಾಮುಂಡಿ ಬೆಟ್ಟದಲ್ಲಿ ಹೊಸ ವರ್ಷದ ಮೊದಲ ದಿನದಂದು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಹಲವು ಪ್ರವಾಸಿ ಕೇಂದ್ರಗಳ ಬಳಿ ಸಹಾಯವಾಣಿ ಕೇಂದ್ರಗಳು ತೆರೆಯಲಾಗಿದೆ. ಅಲ್ಲದೆ ಟಿಕೆಟ್ ಕೌಂಟರ್ ಗಳನ್ನು ತಾತ್ಕಾಲಿಕ ವಾಗಿ ಹೆಚ್ಚಿಸಲಾಗಿದೆ. ಮೈಸೂರು ಅರಮನೆಯಲ್ಲಿ ವಿಶೇಷ ಫಲಪುಷ್ಪ ಪ್ರದರ್ಶನ ಕೂಡ ನಡೆಯುತ್ತಿದ್ದು, ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ.

ಅಲ್ಲದೆ ಮೈಸೂರು ಅರಮನೆಯಲ್ಲಿ ಇಂದು ಸಂಜೆ ವಿಶೇಷ ಸಂಗೀತ ಕಾರ್ಯಕ್ರಮ ಹಾಗೂ ಶಬ್ದ ರಹಿತ ಸಿಡಿಮದ್ದು ಸಿಡಿತ ಕೂಡ ನಡೆಯಲಿದೆ. ಪ್ರವಾಸಿಗರಿಗೆ ಮೈಸೂರು ಪ್ರವಾಸ ಹೆಚ್ಚು ಖುಷಿಯಿಂದ ಕೂಡಿರಲು ಎಲ್ಲ ವ್ಯವಸ್ಥೆಯನ್ನೂ ಮೈಸೂರಲ್ಲಿ ಮಾಡಲಾಗಿದೆ. ಹೀಗಾಗಿ ಪ್ರವಾಸಿಗರು ಸಂತೋಷದಿಂದ ಮೈಸೂರ ಸವಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ
ಚಾಮರಾಜೇಂದ್ರ ಮೃಗಾಲಯಕ್ಕೆ ಅರಣ್ಯ ಇಲಾಖೆ ಖಾತೆ ಸಚಿವ ಸಿ.ಸಿ.ಪಾಟೀಲ್ ಇಂದು ಭೇಟಿ ನೀಡಿದ್ದರು. ಈ ವೇಳೆ ಪಶ್ಚಿಮ ಹೂಲನ್ ಗಿಬ್ಬನ್ ಜೋಡಿಯನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಿದರು. ಇತ್ತೀಚೆಗೆ ಪ್ರಾಣಿ ವಿನಿಮಯ ಯೋಜನೆಯಡಿ ಮೈಸೂರು ಮೃಗಾಲಯಕ್ಕೆ ಪಶ್ಚಿಮ ಹೂಲನ್ ಗಿಬ್ಬನ್ ಜೋಡಿ ತರಲಾಗಿತ್ತು. ಹೊಸ ವರ್ಷದ ಮೊದಲ ದಿನ ಕಿಕ್ಕಿರಿದು ತುಂಬಿದ್ದ ಪ್ರವಾಸಿಗರ ವೀಕ್ಷಣೆಗೆ ಅನುವಾಗುವಂತೆ ಗಿಬ್ಬನ್ ಜೋಡಿ ವೀಕ್ಷಣೆಗೆ ಮುಕ್ತಗೊಳಿಸಲಾಯಿತು. ಪ್ರಾಣಿ ಮನೆಯಿಂದ ಹೊರ ಬರುತ್ತಿದ್ದಂತೆ ವೀಕ್ಷಕರ ಗಮನವನ್ನು ಗಿಬ್ಬನ್ ಗಳು ಸೆಳೆಯುತ್ತಿದ್ದು, ತುಂಟಾಟಗಳ ಮೂಲಕ ಪ್ರವಾಸಿಗರನ್ನು ರಂಜಿಸುತ್ತಿವೆ.

Comments

Leave a Reply

Your email address will not be published. Required fields are marked *