ಕೆಮಿಕಲ್ ಮಿಶ್ರಿತ ನೀರಿನಿಂದ ಲಕ್ಷಾಂತರ ಮೀನುಗಳ ಮಾರಣ ಹೋಮ

fish

ಬೆಂಗಳೂರು/ಆನೇಕಲ್: ಬ್ಯಾಟರಿ ಕಾರ್ಖಾನೆಗಳು ನೇರವಾಗಿ ಕಲುಷಿತ ನೀರನ್ನು ಕೆರೆಗೆ ಬಿಡುತ್ತಿರುವ ಹಿನ್ನೆಲೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮೈಸೂರಮ್ಮನ ದೊಡ್ಡಿ ಗ್ರಾಮದ ಕೆರೆಯಲ್ಲಿ ಮೀನುಗಳ ಮಾರಣಹೋಮ ನಡೆದಿದೆ.

ಮೈಸೂರಮ್ಮನ ದೊಡ್ಡಿ ಗ್ರಾಮದ ಕೆರೆಯ ಬಳಿ ಬ್ಯಾಟರಿ ಕಂಪನಿಗಳಿದ್ದು, ಕಂಪನಿಗಳಿಂದ ಬರುವ ಕೆಮಿಕಲ್ ಮಿಶ್ರಿತ ತ್ಯಾಜ್ಯ ಕಲುಷಿತ ನೀರಿನಿಂದಾಗಿ ಇದೀಗ ಕೆರೆ ಸಂಪೂರ್ಣ ಕಲುಷಿತವಾಗಿದೆ. ಅಲ್ಲದೇ ಕಳೆದ ವಾರದಿಂದ ಮಳೆಯಾಗುತ್ತಿದ್ದು, ಮಳೆ ನೀರಿನ ಜೊತೆ ಕೆಮಿಕಲ್ ನೀರು ಸಹ ಕೆರೆ ಸೇರಿ ಇದೀಗ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ. ಇದನ್ನೂ ಓದಿ:ಮಳೆಯಬ್ಬರಕ್ಕೆ ನಲುಗಿದ ಸಿಲಿಕಾನ್ ಸಿಟಿ- ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಪರದಾಟ

fish

ಈ ಕುರಿತು ಈಗಾಗಲೇ ಸ್ಥಳೀಯರು ಎಷ್ಟು ಬಾರಿ ಅಧಿಕಾರಿಗಳ ಮೊರೆ ಹೋದರೂ ಸಹ ಇದುವರೆಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ಇನ್ನೂ ಅದೇ ಗ್ರಾಮದ ಮಹದೇವಪ್ಪ ಅವರು ಕೆರೆ ಟೆಂಡರ್ ಪಡೆದಿದ್ದು, ಮೀನುಗಳು ಸುಮಾರು ಎರಡರಿಂದ ಮೂರು ಕೆಜಿಯಷ್ಟು ಬೆಳೆದಿದ್ದವು. ಈಗ ಮೀನುಗಳ ಸಾವಿನಿಂದ ಲಕ್ಷಾಂತರ ರೂ.ಗಳ ನಷ್ಟ ಅನುಭವಿಸುವಂತಾಗಿದೆ. ಈ ಒಂದು ಸಮಸ್ಯೆ ಕೇವಲ ನಿನ್ನೆ ಮೊನ್ನೆಯದಲ್ಲ ಅನೇಕ ವರ್ಷಗಳಿಂದ ಕೆರೆಗೆ ಪಕ್ಕದಲ್ಲೇ ಬ್ಯಾಟರಿ ಫ್ಯಾಕ್ಟರಿ ಇದ್ದು, ಇದಕ್ಕೂ ಮೊದಲು ತಹಶೀಲ್ದಾರ್ ದಾಳಿ ಮಾಡಿ ಫ್ಯಾಕ್ಟರಿಯನ್ನು ಮುಚ್ಚಿಸಿದ್ದರು. ಇದೀಗ ಆ ಫ್ಯಾಕ್ಟರಿ ಮತ್ತೆ ಚಾಲ್ತಿಯಲ್ಲಿದ್ದು, ಅಧಿಕಾರಿಗಳು ಕಂಡೂ ಕಾಣದಂತೆ ಸುಮ್ಮನಿದ್ದಾರೆ.

fish

ಈ ಕೆರೆಯ ನೀರನ್ನು ಕುಡಿದು ಎಷ್ಟೋ ಜಾನುವಾರುಗಳು ಅನಾರೋಗ್ಯಕ್ಕೀಡಾಗಿದೆ. ಜೊತೆಗೆ ಇದೀಗ ಎಲ್ಲೆ ಬೋರ್ವೆಲ್ ಅಗೆದರೂ ಸಹ ಕೆಮಿಕಲ್ ಮಿಶ್ರಿತ ನೀರೆ ಬರುತ್ತಿದ್ದು, ಅಂತರ್ಜಲ ಪೂರ್ತಿ ಹಾಳಾಗಿದೆ. ಇಷ್ಟೆಲ್ಲಾ ವಿಷಯಗಳು ತಿಳಿದಿದ್ದರೂ ಸಹ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಅಭಿಮಾನಿಯೊಂದಿಗೆ ಬೈಕ್ ಏರಿದ ಶಿವರಾಜ್‍ಕುಮಾರ್ – ವೀಡಿಯೋ ವೈರಲ್

Comments

Leave a Reply

Your email address will not be published. Required fields are marked *