ಎಚ್‍ಡಿಕೆ ಮಾತಿಗೆ ಬೆಲೆ ಕೊಟ್ಟು ಜನ ಬಿಜೆಪಿ ಸರ್ಕಾರವನ್ನು ಉಳಿಸಿದ್ದಾರೆ: ಜಿಟಿಡಿ

– ಕುಮಾರಸ್ವಾಮಿ ನಡೆಯೇ ಬೇರೆ, ನುಡಿಯೇ ಬೇರೆ
– ವಿಶ್ವನಾಥ್ ಸೋಲಿಗೆ ಯೋಗೀಶ್ವರ್ ಕಾರಣ

ಮೈಸೂರು: ಮಾಜಿ ಸಿಎಂ ಎಚ್‍ಡಿಕೆ ಮತ್ತು ಅನರ್ಹ ಶಾಸಕ ಹಳ್ಳಿಹಕ್ಕಿ ವಿಶ್ವನಾಥ್ ವಿರುದ್ಧ ಮಾಜಿ ಸಚಿವ ಜಿ.ಟಿ ದೇವೇಗೌಡ ಕಿಡಿಕಾರಿದ್ದಾರೆ.

ಉಪ ಚುನಾವಣೆಯಲ್ಲಿ ಜೆಡಿಎಸ್ ಗೆ ಶೂನ್ಯ ಸಾಧನೆ ವಿಚಾರ ಹಾಗೂ ಹುಣಸೂರು ಉಪ ಚುನಾವಣೆಯಲ್ಲಿ ತಮ್ಮ ಸೋಲಿಗೆ ಜಿ.ಟಿ. ದೇವೇಗೌಡ ಕಾರಣ ಎಂಬ ಎಚ್. ವಿಶ್ವನಾಥ್ ಹೇಳಿಕೆ ಬಗ್ಗೆ ಮೈಸೂರಿನಲ್ಲಿ ಮಾಜಿ ಸಚಿವ ಜಿ.ಟಿ. ದೇವೇಗೌಡ ಮಾಧ್ಯಮದವರ ಮಾತಾಡಿದ್ದಾರೆ. ಉಪ ಚುನಾವಣೆ ಘೋಷಣೆ ಮುನ್ನವೆ ಎಚ್‍ಡಿಕೆ ಕುಮಾರಸ್ವಾಮಿ ಬಿಜೆಪಿ ಸರಕಾರ ಉಳಿಸುತ್ತೇನೆ ಎಂದು ಹೇಳಿದ್ರು ಹೀಗಾಗಿ ಜನ ಜೆಡಿಎಸ್ ಅನ್ನು ಶೂನ್ಯ ಮಾಡಿ ಸರಕಾರ ಭದ್ರ ಮಾಡಿದ್ದಾರೆ ಇದರಲ್ಲಿ ತಪ್ಪೇನಿದೆ. ಜನ ಎಚ್‍ಡಿಕೆ ಮಾತಿನಂತೆ ನಡೆದು ಕೊಂಡಿದ್ದಾರೆ ಎಂದು ಹೇಳುವ ಮೂಲಕ ಜೆಡಿಎಸ್ ಶೂನ್ಯ ಸಾಧನೆ ವಿಚಾರದಲ್ಲಿ ಎಚ್ಡಿಕೆ ಕಾಲನ್ನು ಜಿಟಿಡಿ ಎಳೆದರು.

ಕುಮಾರಣ್ಣ ಮುತ್ತಿನಂತ ಮಾತು ಆಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಇತ್ತೀಚೆಗೆ ಅವರು ಆಡುತ್ತಿರುವ ಮಾತುಗಳು ಅಭಿಮಾನಿಗಳನ್ನೇ ಕೆರಳಿಸಿದೆ. ಕುಮಾರಸ್ವಾಮಿ ಅವರ ನಡೆಯೇ ಬೇರೆ, ನುಡಿಯೇ ಬೇರೆ ಆಗಿದೆ. ಇನ್ನಾದರೂ ಅವರು ಬದಲಾಗಬೇಕು. ಆಡುವ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಲಿ ಎಂದು ಎಚ್‍ಡಿಕೆಗೆ ಸಲಹೆ ನೀಡಿದರು.

ಹುಣಸೂರು ಉಪ ಚುನಾವಣೆಯಲ್ಲಿ ಎಚ್. ವಿಶ್ವನಾಥ್ ಸೋಲಿಗೆ ಸಿ.ಪಿ. ಯೋಗೀಶ್ವರ್ ಕಾರಣ. ಯೋಗೀಶ್ವರ್ ಸಮುದಾಯದ ನಾಯಕರನ್ನು ಟೀಕಿಸಿದ್ದರಿಂದ ಒಕ್ಕಲಿಗರು ವಿಶ್ವನಾಥ್ ವಿರುದ್ಧ ತಿರುಗಿ ಬಿದ್ದರು. ಅವನ್ಯಾರು ದೇವೇಗೌಡ, ಕುಮಾರಸ್ವಾಮಿ, ಜಿ.ಟಿ.ದೇವೇಗೌಡ ಅಂತೆಲ್ಲ ಮಾತನಾಡಿದರು. ದುಡ್ಡು, ಸೀರೆ, ಕುಕ್ಕರ್ ಹಂಚಿ ಗೆಲ್ಲುತ್ತೇವೆ ಎಂಬ ಹುಂಬತನ ಅವರಲ್ಲಿ ಇತ್ತು. ಹೀಗಾಗಿ 5 ಕೋಟಿ ಆಮಿಷ ತೋರಿ ಒಕ್ಕಲಿಗರನ್ನು ಓಲೈಸುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಿದರು.

ಜಿಟಿಡಿ ಪಕ್ಷದ್ರೋಹಿ ಎಂಬ ವಿಶ್ವನಾಥ್ ಹೇಳಿಕೆಗೂ ಜಿ.ಟಿ.ದೇವೇಗೌಡ ತಿರುಗೇಟು ನೀಡಿ, ಹುಣಸೂರಿನಲ್ಲಿ ನಾನು ವಿಶ್ವನಾಥ್ ಬೆಂಬಲಿಸುತ್ತೇನೆ ಎಂದು ಎಲ್ಲಿಯೂ ಹೇಳಿರಲಿಲ್ಲ. ಇಡೀ ಚುನಾವಣೆಯಲ್ಲಿ ನಾನು ಭಾಗವಹಿಸಲ್ಲ ಅಂತ ಮೊದಲೇ ಹೇಳಿದ್ದೆ. ಅಂದ ಮೇಲೆ ಪಕ್ಷದ್ರೋಹಿ ಹೇಗಾಗುತ್ತೆ? ನಾನು ಈಗಲೂ ತಟಸ್ಥನಾಗಿಯೇ ಇದ್ದೇನೆ. ನನ್ನ ಮಗ ಸ್ವತಂತ್ರನಿದ್ದಾನೆ. ಅವನು ಸ್ವತಂತ್ರ ನಿರ್ಧಾರ ಕೈಗೊಂಡಿದ್ದಾನೆ ಎಂದು ಸ್ಪಷ್ಟಪಡಿಸಿದರು.

ಯೋಗೀಶ್ವರ್ ಟೀಕೆ ನಂತರ ನನ್ನ ಮಗ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಸ್ವಂತ ನಿರ್ಧಾರ ಕೈಗೊಂಡಿದ್ದಾನೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಬೆಂಬಲ ವಿಚಾರದಲ್ಲಿ ತಮ್ಮ ಮಗನನ್ನು ಜಿಟಿಡಿ ಸಮರ್ಥಿಸಿಕೊಂಡರು. ವಿಶ್ವನಾಥ್ ಹುಣಸೂರು ಕ್ಷೇತ್ರ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾದರು. ಅವರು ಎಲ್ಲಿಂದಲೋ ಬಂದವರು. ಕಳೆದ ಬಾರಿ ಎಚ್‍ಡಿ ದೇವೇಗೌಡರು, ನಾನು ಒಟ್ಟಿಗೆ ಸೇರಿ ಗೆಲ್ಲಿಸಿಕೊಂಡಿದ್ದೆವು. ಆದರೆ ಅದನ್ನು ಉಳಿಸಿಕೊಳ್ಳಲು ವಿಶ್ವನಾಥ್ ಕೈಯಲ್ಲಿ ಆಗಲಿಲ್ಲ. ಹಳ್ಳಿ ಹಳ್ಳಿಯಲ್ಲಿ ಜನ ಆಕ್ರೋಶ ಹೊರಹಾಕಿದ್ರು. ಗ್ರಾಮಗಳ ಒಳಗೆ ಬಿಟ್ಟು ಕೊಳ್ಳಲಿಲ್ಲ. ಅದು ಅವರ ಸೋಲಿಗೆ ಕಾರಣ ಎಂದರು.

Comments

Leave a Reply

Your email address will not be published. Required fields are marked *