ಮ್ಯಾನ್ಮಾರ್: ವಾಟರ್ ಫೆಸ್ಟಿವಲ್ ವೇಳೆ 285 ಜನರ ಸಾವು, 1073 ಮಂದಿಗೆ ಗಾಯ

ಯಾಂಗಾನ್: ಮ್ಯಾನ್ಮಾರ್‍ನಲ್ಲಿ ನಡೆದ ನಾಲ್ಕು ದಿನಗಳ ವಾಟರ್ ಫೆಸ್ಟಿವಲ್‍ನಲ್ಲಿ ಒಟ್ಟು 285 ಮಂದಿ ಮೃತಪಟ್ಟು, 1,073 ಮಂದಿಗೆ ಗಾಯಗಳಾದ ಬಗ್ಗೆ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಮ್ಯಾನ್ಮಾರ್ ನಲ್ಲಿ ಹೊಸ ವರ್ಷವನ್ನು ತಿಂಗ್ಯಾನ್ ವಾಟರ್ ಫೆಸ್ಟಿವೆಲ್ ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ವರ್ಷ ಕಳೆದ ಗುರುವಾರದಿಂದ ಭಾನುವಾರದವರೆಗೆ ವಾಟರ್ ಫೆಸ್ಟಿವಲ್ ಆಚರಿಸಲಾಯಿತು. ನಿಗದಿತ ಸ್ಥಳಗಳಲ್ಲಿ ಜಮಾವಣೆಗೊಳ್ಳುವ ಜನ ನೀರೆರಚಿಕೊಂಡು ಸಂಭ್ರಮಿಸುವುದೇ ಈ ವಾಟರ್ ಫೆಸ್ಟಿವಲ್‍ನ ವಿಶೇಷತೆ.

ಮ್ಯಾನ್ಮಾರ್‍ನ ಪ್ಯಿ ಟಾವ್ ನಲ್ಲಿ 10, ಯಾಂಗೂನ್ ನಲ್ಲಿ 44, ಮಂಡಾಲೆಯಲ್ಲಿ 36, ಸ್ಯಾಗಿಂಗ್ ಪ್ರಾಂತ್ಯದಲ್ಲಿ 26, ತನ್ನಿಂತರಿ ಪ್ರಾಂತ್ಯದಲ್ಲಿ 11, ಬಾಗೊ ಪ್ರಾಂತ್ಯದಲ್ಲಿ 37, ಮಾಗ್‍ವೇ ಪ್ರಾಂತ್ಯದಲ್ಲಿ 11, ಮಾನ್ ರಾಜ್ಯದಲ್ಲಿ 20, ರಖಿನೆಯಲ್ಲಿ 17, ಶಾನ್ ರಾಜ್ಯದಲ್ಲಿ 29 ಹಾಗೂ ಅಯೆಯವಾಡ್ಡಿ ಪ್ರಾಂತ್ಯದಲ್ಲಿ 28 ಮಂದಿ ವಾಟರ್ ಫೆಸ್ಟಿವೆಲ್ ವೇಳೆ ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಒಟ್ಟು 1,200 ಕ್ರಿಮಿನಲ್ ಕೇಸ್‍ಗಳು ದಾಖಲಾಗಿದೆ. ಕೊಲೆ, ಕಾರು ಅಪಘಾತ, ಮಾದಕ ವ್ಯಸನ, ಕಳ್ಳತನ, ಶಸ್ತ್ರಾಸ್ತ್ರ ಹೊಂದಿದ್ದ ಬಗ್ಗೆ ಹಾಗೂ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಈ ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗಿದೆ ಅಂತಾ ವರದಿಯಾಗಿದೆ.

ಕಳೆದ ವರ್ಷದ ವಾಟರ್ ಫೇಸ್ಟಿವಲ್‍ನಲ್ಲಿ ಒಟ್ಟು 272 ಮಂದಿ ಮೃತಪಟ್ಟು, 1,086ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Comments

Leave a Reply

Your email address will not be published. Required fields are marked *