– ‘ರಾಮ ನಾಮ ಸತ್ಯ ಹೇ’ ಎಂದು ಕೂಗಿದ ಮುಸ್ಲಿಮರು
– ಹಿಂದೂ ವ್ಯಕ್ತಿಯ ಕುಟುಂಬದ ಸಹಾಯಕ್ಕೆ ಧಾವಿಸಿದ್ರು
ಲಕ್ನೋ: ಕೊರೊನಾ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದೆ. ಈ ಲಾಕ್‍ಡೌನ್ ಮಧ್ಯೆ ಅಕಾಲಿಕವಾಗಿ ಯಾರಾದರೂ ಮೃತಪಟ್ಟರೇ ಅವರ ಅಂತ್ಯಕ್ರಿಯೆ ಮಾಡುವುದು ತುಂಬಾ ಕಷ್ಟವಾಗಿದೆ. ಅದರಂತೆಯೇ ಉತ್ತರ ಪ್ರದೇಶದಲ್ಲಿ ಹಿಂದೂ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯನ್ನು ಮುಸ್ಲಿಮರು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಈ ಘಟನೆ ನಡೆದಿದ್ದು, ಹಿಂದೂ ವ್ಯಕ್ತಿಯ ಮೃತದೇಹವನ್ನು ಮುಸ್ಲಿಮರು ಅಂತ್ಯಸಂಸ್ಕಾರಕ್ಕೆ ಹೊತ್ತೊಯ್ಯುತ್ತಾ ‘ರಾಮ ನಾಮ ಸತ್ಯ ಹೇ’ ಎಂದು ಕೂಗುತ್ತಾ ಸಾಗಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬುಲಂದ್‌ಶಹರ್‌ನ ಆನಂದ ವಿಹಾರ ಪ್ರದೇಶದ ನಿವಾಸಿ ರವಿ ಶಂಕರ್ (40) ಕ್ಯಾನ್ಸರ್‌ನಿಂದ ಶನಿವಾರ ಮಧ್ಯಾಹ್ನ ತನ್ನ ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ಇವರು ಪತ್ನಿ ಮತ್ತು ನಾಲ್ಕು ಮಕ್ಕಳನ್ನು ಅಗಲಿದ್ದಾರೆ. ಇತ್ತ ಲಾಕ್‍ಡೌನ್ ಆದ ಕಾರಣ ಸಂಬಂಧಿಕರು ಅಂತ್ಯಕ್ತಿಯೆಗೆ ಬರಲು ಸಾಧ್ಯವಾಗಲಿಲ್ಲ. ಇದರಿಂದ ಪತ್ನಿ ಅಂತ್ಯಸಂಸ್ಕಾರ ಹೇಗೆ ಮಾಡುವುದು ಎಂದು ಆತಂಕಗೊಂಡು ದುಃಖಿತರಾಗಿದ್ದರು.
ಈ ವೇಳೆ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ನೆರೆಹೊರೆಯ ಮುಸ್ಲಿಮರು ಧಾವಿಸಿದ್ದಾರೆ. ಅಲ್ಲದೇ ಮುಸ್ಲಿಮರು ಹಿಂದೂ ಘೋಷವಾಕ್ಯಗಳನ್ನು ಪಠಿಸುತ್ತ ವ್ಯಕ್ತಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದ್ದಾರೆ.
https://twitter.com/Benarasiyaa/status/1244136136651313153
ಇದೀಗ ಈ ವಿಡಿಯೋ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮುಸ್ಲಿಮರಿಗೆ ಅನೇಕರು ಧನ್ಯವಾದ ತಿಳಿಸುತ್ತಿದ್ದಾರೆ. “ಸ್ಥಳೀಯ ಜನರೆಲ್ಲರೂ ರವಿ ಕುಟುಂಬಕ್ಕೆ ಸಹಾಯ ಮಾಡಲು ಮುಂದೆ ಬಂದರು. ಎರಡು ಸಮುದಾಯ ಮೊದಲಿನಿಂದಲೂ ಪರಸ್ಪರರಿಗೆ ನೆರವಾಗುತ್ತ ಉತ್ತಮ ಸಂಬಂಧ ಹೊಂದಿದ್ದೇವೆ” ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ಜುಬೈದ್ ತಿಳಿಸಿದ್ದಾರೆ.

Leave a Reply