ನನಗೆ ತಲಾಕ್ ಬೇಡ ಗಂಡ ಬೇಕು – ಡಿಸಿ ಕಚೇರಿ ಎದುರು ಉಪವಾಸ ಕುಳಿತ ಮಹಿಳೆ

ಶಿವಮೊಗ್ಗ: ಪತಿ ತಲಾಕ್ ನೀಡಿರುವುದನ್ನು ವಿರೋಧಿಸಿ ಇದೀಗ ಆತನ ಪತ್ನಿ ಹಾಗು ಮಗಳು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ರದ್ದುಗೊಳಿಸಿ ನೂತನ ಕಾಯ್ದೆ ಜಾರಿಗೆ ತಂದಿದ್ದರೂ ಶಿವಮೊಗ್ಗದಲ್ಲಿ ವಾಟ್ಸಾಪ್ ಮೂಲಕ ಪತಿ ಮಹಾಶಯನೋರ್ವ ಪತ್ನಿಗೆ ಮೂರು ಬಾರಿ ತಲಾಕ್ ಎಂದು ಹೇಳುವ ಮೂಲಕ ವಿಚ್ಛೇದನ ನೀಡಿದ್ದಾನೆ.

ನಗರದ ಟ್ಯಾಂಕ್ ಮೊಹಲ್ಲಾ ನಿವಾಸಿ ಮುಸ್ತಫಾ ಬೇಗ್ ಹಾಗು ಆಯಿಷಾ ಕಳೆದ 21 ವರ್ಷಗಳ ಹಿಂದೆ ಪರಸ್ವರ ಪ್ರೀತಿಸಿ ವಿವಾಹವಾಗಿದ್ದರು. ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಮುಸ್ತಫಾ ಬೇಗ್ ತನ್ನ ಪತ್ನಿಯನ್ನು ಶಿವಮೊಗ್ಗದಲ್ಲಿಯೇ ಉಳಿಸಿದ್ದ. ಆದರೆ ಒಂದು ತಿಂಗಳ ಹಿಂದೆ ಇದ್ದಕಿದ್ದಂತೆ ದುಬೈನಲ್ಲಿಯೇ ಕುಳಿತು ಪತ್ನಿ ಆಯಿಷಾಗೆ ವಾಟ್ಸಾಪ್ ನಲ್ಲಿಯೇ ತಲಾಕ್ ನೀಡಿ ಕೈ ತೊಳೆದುಕೊಂಡಿದ್ದಾನೆ.

ಪತ್ನಿ ಆಯಿಷಾ ಮಾತ್ರ ನನಗೆ ತಲಾಕ್ ಬೇಡ ಪತಿಯೇ ಬೇಕು ನಾನು ಆತನ ಜೊತೆಯೇ ಸಂಸಾರ ನಡೆಸಬೇಕು. ನನಗೆ ಜೀವನ ಸಾಗಿಸುವುದೇ ಕಷ್ಟಕರವಾಗಿದೆ ನನಗೆ ನ್ಯಾಯ ಕೊಡಿಸಿ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ತಾಯಿ ಮಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಧರಣಿ ಸ್ಥಳಕ್ಕೆ ಆಗಮಿಸಿ ನೊಂದ ಮಹಿಳೆಯ ಮನವಿ ಆಲಿಸಿದ ಅಪರ ಜಿಲ್ಲಾಧಿಕಾರಿ ಅನುರಾಧ ಅವರು ನಿಮಗೆ ಕಾನೂನಿನಡಿಯಲ್ಲಿ ನ್ಯಾಯ ಕೊಡಿಸುತ್ತೇನೆ. ಉಪವಾಸ ಸತ್ಯಾಗ್ರಹ ಕೈಬಿಡಿ ಎಂದು ತಿಳಿಸಿದರೂ ನನಗೆ ನ್ಯಾಯ ಸಿಗುವವರೆಗು ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಮಹಿಳೆ ಪಟ್ಟು ಹಿಡಿದು ಪ್ರತಿಭಟಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *