25 ಲಕ್ಷದ ಸೈಟ್ ಮಾರಿ ಬಡವರು, ನಿರ್ಗತಿಕರಿಗೆ ಮುಸ್ಲಿಂ ಸಹೋದರರು ಸಹಾಯ

ಕೋಲಾರ: ಕೊರೋನಾ ಕರಿ ನೆರಳಿನಲ್ಲಿ ಬಡವರು, ನಿರ್ಗತಿಕರು ಅತಂತ್ರರಾಗಿದ್ದಾರೆ. ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಸಾವಿರಾರು ಜನ ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಸ್ಲಿಂ ಸಹೋದರರು ಸೈಟ್ ಮಾರಿ ಬಡವರಿಗೆ, ನಿರ್ಗತಿಕರಿಗೆ ಉಚಿತವಾಗಿ ರೇಷನ್ ವಿತರಿಸುತ್ತಿದ್ದಾರೆ. ಸಂಕಷ್ಟದಲ್ಲಿರೋರಿಗೆ ಸಹಾಯ ಮಾಡುತ್ತಿರುವ ಮುಸ್ಲಿಂ ಸಹೋದರರ ಕುರಿತು ಒಂದು ವರದಿ ಇಲ್ಲಿದೆ.

ಕೊರೊನಾ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಹಲವಾರು ಜನ ಕೂಲಿ ಕಾರ್ಮಿಕರು, ಕಡು ಬಡವರು ಆಹಾರ ಇಲ್ಲದೆ ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಹಲವಾರು ಸಂಘ ಸಂಸ್ಥೆಗಳು ನೆರವಿಗೆ ನಿಂತು ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಕೋಲಾರದ ಅಲ್ಪ ಸಂಖ್ಯಾತ ಸಹೋದರರು ತಮ್ಮ ನಿವೇಶನ ಮಾರಾಟ ಮಾಡಿ ಬಡವರು, ನಿರ್ಗತಿಕರಿಗೆ ಅಗತ್ಯ ವಸ್ತಗಳನ್ನ ನೀಡುತ್ತಿದ್ದಾರೆ. ಸಹೋದರರಾದ ತಜ್ಮಲ್ ಪಾಷಾ ಹಾಗೂ ಮುಜ್ಮುಲ್ ಪಾಷಾ ಎಂಬವರು ವಿಭಿನ್ನವಾಗಿ ಸಹಾಯ ಮಾಡಲು ನಿಂತಿದ್ದಾರೆ. ತಮ್ಮ ಬಳಿ ಇದ್ದ 25 ಲಕ್ಷ ರೂಪಾಯಿ ವೆಚ್ಚದ ಸೈಟ್ ಮಾರಾಟ ಮಾಡಿ ಬಡವರಿಗೆ ದವಸ, ಧಾನ್ಯ ವಿತರಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಳೆದ ಹದಿನೈದು ದಿನಗಳಿಂದ ಹೀಗೆ ದಿನ ನಿತ್ಯದ ಅಗತ್ಯ ವಸ್ತುಗಳಾದ ಅಕ್ಕಿ, ಬೇಳೆ, ಉಪ್ಪು, ಎಣ್ಣೆ, ಸೇರಿದಂತೆ 11 ಸರಕುಗಳು ಹಾಗೂ ಮಾಸ್ಕ್ ಮತ್ತು ಸ್ಯಾನಿಟೈಸರನ್ನು ಕೂಡ ವಿತರಣೆ ಮಾಡುತ್ತಿದ್ದಾರೆ.

ತಾವು ಮೂಲತ: ಬಡತನದಿಂದ ಬಂದಿದ್ದು ಈ ಇಬ್ಬರು ಸೋದರರಿಗೆ ಕಷ್ಟದಲ್ಲಿದ್ದಂತ ಸಂದರ್ಭದಲ್ಲಿ ಸಾಕಷ್ಟು ಜನ ಸಹಾಯ ಮಾಡಿದ್ರು. ಹಾಗಾಗಿ ಈಗ ಇವರು ಆರ್ಥಿಕವಾಗಿ ಚೆನ್ನಾಗಿದ್ದಾರೆ. ಪರಿಣಾಮ ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸಹಾಯ ಮಾಡಬೇಕು ಅನ್ನೋ ನಿಟ್ಟಿನಲ್ಲಿ ಇಬ್ಬರು ಸಹೋದರರು ನಿರ್ಧಾರ ಮಾಡಿ ತಮ್ಮ ಸೈಟ್ ಒಂದನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಿ, ತಮ್ಮ ಹಲವಾರು ಜನ ಸ್ನೇಹಿತರೊಟ್ಟಿಗೆ ಸೇರಿಕೊಂಡು ಆಹಾರದ ಕಿಟ್ ಮಾಡಿ ಬಡವರ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ಈ ಸಹೋದರರು ಜಾತಿ- ಧರ್ಮವನ್ನ ಮೀರಿ ಸಮಾಜ ಸೇವೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಬಡವರಿಗೆ ಮತ್ತು ನಿರ್ಗತಿಕರಿಗೆ ಉಚಿತವಾಗಿ ರೇಷನ್ ವಿತರಿಸುತ್ತಿದ್ದಾರೆ. ಸ್ವಂತ ಆಸ್ತಿ ಮಾರಾಟ ಮಾಡಿದ ಹಣದಲ್ಲಿ ಕೊರೋನಾ ಎಫೆಕ್ಟ್ ನಿಂದ ತತ್ತರಿಸಿರುವವರಿಗೆ ರೇಷನ್, ಮಾಸ್ಕ್ ಗಳು ಹಾಗೂ ಡ್ಯಾನಿ ಡೈಸರ್ ಗಳನ್ನ ಇವರು ವಿತರಿಸುತ್ತಿದ್ದಾರೆ. ಇವರೊಂದಿಗೆ ಸಹೋದರರು, ಸ್ನೇಹಿತರು ಜೊತೆಗೂಡಿದ್ದಾರೆ. ಇವರ ಮೊಬೈಲ್‍ಗೆ ಕರೆ ಮಾಡಿದರೆ ಸ್ವಲ್ಪ ಹೊತ್ತಿಗೆ ನಿಮ್ಮ ಮನೆಗೆ 11 ವಿಧದ ರೇಷನ್ ತಲುಪಲಿದೆ. ಮುಸ್ಲಿಂ ಸಹೋದರರ ಸಮಾಜ ಸೇವೆಯನ್ನ ಸಾರ್ವಜನಿಕರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

Comments

Leave a Reply

Your email address will not be published. Required fields are marked *