ಎಚ್ಚರಿಕೆಯ ನಡುವೆಯು ಪ್ರವಾಸಿಗರ ಹುಚ್ಚಾಟ – ಮುರುಡೇಶ್ವರದಲ್ಲಿ ಸಮುದ್ರದ ಪಾಲಾದ ಯುವಕ, ಇಬ್ಬರ ರಕ್ಷಣೆ

ಕಾರವಾರ: ಅಲೆಯ ಅಬ್ಬರಕ್ಕೆ (Sea Waves) ಯುವಕನೋರ್ವ ಸಮುದ್ರದಲ್ಲಿ ಕೊಚ್ಚಿ ಹೋದ ಘಟನೆ ಮುರುಡೇಶ್ವರದಲ್ಲಿ (Murdeshwar) ಸೋಮವಾರ ನಡೆದಿದೆ. ಈ ವೇಳೆ ಮುಳುಗುತ್ತಿದ್ದ ಇಬ್ಬರನ್ನು ಲೈಫ್‍ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.

ಹುಬ್ಬಳ್ಳಿಯ ಸಂತೋಷ್ ಹುಲಿಗುಂಡ (19) ಸಮುದ್ರಪಾಲಾದ ಯುವಕನಾಗಿದ್ದು, ಹಸನ್ ಮಜಗೀಗೌಡ (20) ಹಾಗೂ ಸಂಜೀವ್ (20) ಎಂಬುವವರನ್ನು ಲೈಫ್‍ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಅಲೆಗೆ ಕೊಚ್ಚಿಹೋದ ಯುವಕನ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತುಂಬಿ ತುಳುಕುತ್ತಿದ್ದ ಸಾರಿಗೆ ಬಸ್‍ನಿಂದ ಬಿದ್ದು ಬಾಲಕಿ ಸಾವು

ಹುಬ್ಬಳ್ಳಿ ಹಾಗೂ ಕಲಕಟಗಿಯಿಂದ 22 ಜನ ಪ್ರವಾಸಕ್ಕೆ ಬಂದಿದ್ದು, ಸಿಗಂದೂರು (Sigandur), ಕೊಲ್ಲೂರು ಪ್ರವಾಸ ಮುಗಿಸಿ ಮುರುಡೇಶ್ವರಕ್ಕೆ ಬಂದಿದ್ದರು. ಈ ವೇಳೆ ಪ್ರವಾಸಿಗರಿಗೆ ಲೈಫ್ ಗಾರ್ಡ್ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಆದರೂ ಮೂರು ಜನ ಪ್ರವಾಸಿಗರು ಸಮುದ್ರಕ್ಕಿಳಿದಿದ್ದಾರೆ. ಇದರಿಂದ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಷೇಧದ ನಡುವೆಯೂ ಪ್ರವಾಸಿಗರ ಹುಚ್ಚಾಟ
ಉತ್ತರ ಕನ್ನಡ (Uttara Kannada) ಜಿಲ್ಲೆಯ ಕರಾವಳಿ ಭಾಗದಲ್ಲಿ ಪ್ರವಾಸಿಗರಿಗೆ ಕಡಲಲ್ಲಿ ಇಳಿಯದಂತೆ ನಿಷೇಧ ಹೇರಲಾಗಿದೆ. ಆದರೂ ಜಿಲ್ಲೆಯ ಮುರುಡೇಶ್ವರ ಹಾಗೂ ಗೋಕರ್ಣಕ್ಕೆ (Gokarna) ಬರುವ ಪ್ರವಾಸಿಗರು ಲೈಫ್‍ಗಾರ್ಡ್‍ಗಳ ಸೂಚನೆಯನ್ನು ಲೆಕ್ಕಿಸದೆ ಸಮುದ್ರಕ್ಕಿಳಿಯುತಿದ್ದಾರೆ. ಕಳೆದ ವರ್ಷ 11 ಜನ ಸಮುದ್ರದ ಪಾಲಾಗಿದ್ದರು. ಹೀಗಾಗಿ ಮಳೆಗಾಲ ಹಾಗೂ ಚಂಡಮಾರುತದ ಸಂದರ್ಭದಲ್ಲಿ ಜಲಸಾಹಸ ಕ್ರೀಡೆಗಳಿಗೆ ನಿಷೇಧ ಹೇರಲಾಗುತ್ತದೆ. ಬರುವ ಪ್ರವಾಸಿಗರು ಮೋಜು ಮಸ್ತಿಯಿಂದಾಗಿ ತಮ್ಮ ಜೀವಕ್ಕೆ ತಾವೇ ಆಪತ್ತು ತಂದುಕೊಳ್ಳುತಿದ್ದಾರೆ. ಇದನ್ನೂ ಓದಿ: ವಾಟ್ಸಾಪ್‍ನಲ್ಲಿ ಔರಂಗಜೇಬ್ ಡಿಪಿ ಹಾಕಿದ್ದ ವ್ಯಕ್ತಿಯ ಬಂಧನ