ಬೈಕ್ ಮೇಲೆ ಕೂರಿಸಿಕೊಂಡು ಬಂದು ಗ್ರಾಮದ ವೃತ್ತದಲ್ಲಿ ಮಲಗಿಸಿದ್ರು – ಇದು ಕೊಲೆಯೆಂದ ಸಂಬಂಧಿಕರು

ಶಿವಮೊಗ್ಗ: ದ್ವಿಚಕ್ರ ವಾಹನದಲ್ಲಿ ಇಂದು ಮುಂಜಾನೆ ವ್ಯಕ್ತಿಯೊಬ್ಬನನ್ನು ಕೂರಿಸಿಕೊಂಡು ಬಂದು ಜಿಲ್ಲೆಯ ಶಿಕಾರಿಪುರ (Shikaripur) ತಾಲೂಕಿನ ಮುತ್ತಳ್ಳಿ ಗ್ರಾಮದ ವೃತ್ತದ ಬಳಿ ಮಲಗಿಸಿ ಹೋಗಿರುವ ಘಟನೆ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಮಲಗಿಸಿ ಹೋದ ವ್ಯಕ್ತಿ ಮೃತಪಟ್ಟಿದ್ದು ಇದು ಕೊಲೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಶಿರಾಳಕೊಪ್ಪ((Shiralakoppa) ಪೊಲೀಸ್ ಠಾಣೆ ವ್ಯಾಪ್ತಿಯ ಮುತ್ತಳ್ಳಿ ಗ್ರಾಮದ ಕೃಷಿ ಕಾರ್ಮಿಕನಾಗಿರುವ ಸೋಮಪ್ಪ (30) ಮೃತ ವ್ಯಕ್ತಿ. ಮೃತ ಸೋಮಪ್ಪ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಗಂಗಮ್ಮ ಎಂಬ ಮಹಿಳೆಯೊಂದಿಗೆ ಸ್ನೇಹವಿದ್ದು, ಆಕೆಯೇ ಕರೆಯಿಸಿ ಸೋಮಪ್ಪನನ್ನ ಕೊಲೆ ಮಾಡಿರುವುದಾಗಿ ಮೃತನ ಕುಟುಂಬ ಆರೋಪಿಸಿದೆ. ಇದನ್ನೂ ಓದಿ: ಹತ್ರಾಸ್ ರೇಪ್ ಕೇಸ್ – ಓರ್ವ ದೋಷಿ, ಮೂವರು ಖುಲಾಸೆ

ಮೃತ ಸೋಮಪ್ಪನಿಗೆ ಈಗಾಗಲೇ ಮದುವೆಯಾಗಿದ್ದು, ಒಬ್ಬಳು ಮಗಳು ಇದ್ದಾಳೆ. ಆದರೆ ಪತ್ನಿಯಿಂದ ದೂರವಾಗಿದ್ದ. ಸೋಮಪ್ಪ ಈ ಹಿಂದೆ ಕೆಲಸಕ್ಕೆಂದು ಹಿರೇಕೆರೂರಿಗೆ ಹೋದಾಗ ಗಂಗಮ್ಮ ಎಂಬುವವರೊಂದಿಗೆ ಸಂಪರ್ಕ ಬೆಳೆದಿದೆ ಎಂದು ಆರೋಪಿಸಲಾಗಿದೆ.

ಬುಧವಾರ ಹಿರೇಕೆರೂರಿಗೆ (Hirekerur) ಕರೆಸಿ ಥಳಿಸಲಾಗಿದೆ. ಥಳಿತಕ್ಕೆ ಸೋಮಪ್ಪ ಮೃತಪಟ್ಟಿದ್ದಾನೆ. ನಂತರ ಆತನನ್ನ ಬೈಕ್ ಮೇಲೆ ಕೂರಿಸಿಕೊಂಡು ಬಂದು ಗುರುವಾರ ಬೆಳಗ್ಗೆ ಗ್ರಾಮದ ಬಳಿ ಮಲಗಿಸಿ ಹೋಗಿದ್ದಾರೆ. ಸೋಮಪ್ಪನ ಮೇಲೆ ಸಾಕಷ್ಟು ಗಾಯಗಳಾಗಿವೆ. ಆತನ ಮೇಲೆ ತುಂಡು ಬಟ್ಟೆ ಬಿಟ್ಟರೆ ಬೇರೆ ಏನು ಇರಲಿಲ್ಲವೆಂದು ಕುಟುಂಬ ಆರೋಪಿಸಿದೆ.

ಬೈಕ್ ಮೇಲೆ ಕೂರಿಸಿಕೊಂಡು ಬಂದವರನ್ನು ಚಾಟಿಕೊಪ್ಪದ ರಮೇಶ್, ಸುದೀಪ್ ಮತ್ತು ಗಂಗಮ್ಮನ ಮಗ ನಾಗರಾಜ್ ಎಂದು ಗುರುತಿಸಲಾಗಿದೆ. ಇವರೇ ಸೇರಿಕೊಂಡು ಕೊಲೆ ಮಾಡಿರುವುದಾಗಿ ಮೃತನ ತಂದೆ ಚಂದ್ರಪ್ಪ, ತಾಯಿ ಶಿವನಾಗಮ್ಮ ಆರೋಪಿಸಿದ್ದಾರೆ. ಆರೋಪಿಗಳ ಮೊಬೈಲ್‍ಗಳು ಸ್ವಿಚ್ ಆಫ್ ಆಗಿದ್ದು, ಇವರ ಪತ್ತೆಗಾಗಿ ಖಾಕಿಪಡೆ ಬಲೆ ಬೀಸಿದೆ. ಇದನ್ನೂ ಓದಿ: ಅತ್ತಿಗೆಯೊಂದಿಗೆ ಸಂಬಂಧ ಹೊಂದಿಲ್ಲ – ಸಾಬೀತುಪಡಿಸಲು ಅಗ್ನಿಪರೀಕ್ಷೆ ಮಾಡಿಕೊಂಡ ಭೂಪ 

Comments

Leave a Reply

Your email address will not be published. Required fields are marked *