ಜೈಲಿನಿಂದ ಹೊರ ಬಂದಿದ್ದವನ ಕೊಲೆ

ಬೆಂಗಳೂರು: ಬಡ್ಡಿ ವ್ಯವಹಾರದ ವಿರುದ್ಧ ದೂರು ನೀಡಿ ಸಾಕ್ಷಿಯಾಗಿದ್ದ ಎಂಬ ಕಾರಣಕ್ಕೆ ರೌಡಿಗಳು ಹಲ್ಲೆ ಮಾಡಿ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ನಗರದ ಕೆ.ಆರ್.ಮಾರ್ಕೆಟ್ ಬಳಿ ನಡೆದಿದೆ.

ಭರತ್ ಕೊಲೆಯಾದ ಯುವಕ. ಮಾರ್ಕೆಟ್‍ನಲ್ಲಿ ನಿಂಬೆ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದನು. ಮಂಗಳವಾರ ಸುಮಾರು 8:30ಕ್ಕೆ ಈಸ್ಟ್ ಗೇಟ್‍ನ ಬಳಿ ತನ್ನ ಬೈಕಿನಿಂದ ಇಳಿದು ಟೀ ಅಂಗಡಿ ಬಳಿ ಕುಳಿತಿದ್ದನು. ಆಗ ಐವರು ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಶರವಣ, ವೆಂಕಟೇಶ್ ಹಾಗೂ ಮೂವರು ಆರೋಪಿಗಳಿಂದ ಹಲ್ಲೆ ನಡೆದಿದೆ ಎಂದು ಭರತ್ ಸಹೋದರ ಅಪ್ಪು ಆರೋಪಿಸಿದ್ದಾರೆ.

ಮಾರ್ಕೆಟ್ ನಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಆರೋಪಿ ಶರವಣ ಹಾಗೂ ಕೊಲೆಯಾದ ಭರತ್‍ನ ನಡುವೆ ಈ ಹಿಂದೆಯೇ ಗಲಾಟೆ ನಡೆದಿದ್ದು, ಪೊಲೀಸ್ ಠಾಣೆಯ ಮೆಟ್ಟಿಲೂ ಸಹ ಏರಿದ್ದರು. ಹಳೆ ರೌಡಿಶೀಟರ್ ಮಾರ್ಕೆಟ್ ವೇಡಿಯ ಬಾವನಾಗಿದ್ದ ಶರವಣ ಆಗಿನಿಂದಲೇ ಭರತ್ ವಿರುದ್ಧ ಹೊಂಚು ಹಾಕಿದ್ದನು.

ಕೊಲೆಯಾದ ಭರತ್ ಕೂಡ ಕಳೆದ ತಿಂಗಳು ಜೆ.ಜೆ ನಗರ ಠಾಣಾ ವ್ಯಾಪ್ತಿಯಲ್ಲಿ ತನ್ನ ಸಹಚರರ ಜೊತೆ ಡಕಾಯಿತಿಗೆ ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದರು. ಹದಿನೈದು ದಿನಗಳ ಹಿಂದಷ್ಟೆ ಜೈಲಿನಿಂದ ಹೊರಬಂದಿದ್ದ. ಜೈಲಿಂದ ಹೊರಬಂದರೂ ಮಾರ್ಕೆಟ್‍ಗೆ ಮಾತ್ರ ಬಂದಿರಲಿಲ್ಲ ಎಂದು ಡಿಸಿಪಿ ರವಿ.ಡಿ.ಚೆನ್ನಣ್ಣನವರ್ ತಿಳಿಸಿದ್ದಾರೆ.

ಸದ್ಯಕ್ಕೆ ಮೃತ ಭರತ್ ಸಹೋದರ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಶೂರು ಮಾಡಿದ್ದು, ಈ ಕೊಲೆಯಲ್ಲಿ ಆರೋಪಿ ಶರವಣನ ಬಾವ ಮಾರ್ಕೆಟ್ ವೇಡಿಯ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

Comments

Leave a Reply

Your email address will not be published. Required fields are marked *