ಸ್ನೇಹಿತನ ಬರ್ತ್ ಡೇಯಂದು ಡಿಜೆ ಸಾಂಗಿಗಾಗಿ ಯುವಕನ ಹೆಣ ಬಿತ್ತು!

ನವದೆಹಲಿ: ಸ್ನೇಹಿತನ ಹುಟ್ಟುಹಬ್ಬದಂದು ಡಿಜೆ ಹಾಡಿಗಾಗಿ ಜಗಳ ಶುರುವಾಗಿ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಪಶ್ಚಿಮ ದೆಹಲಿಯ ಪಂಜಾಬಿ ಬಾಗ್ ರಾಫ್ಟಾರ್ ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ವಿಜಯ್ ದೀಪ್ ಮೃತ ದುರ್ದೈವಿ.

ಘಟನೆಯ ವಿವರ?: ಇಶ್ಮಿತ್, ಈತ ಬಾರಿನಲ್ಲಿ ತನ್ನ 10 ಮಂದಿ ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದನು. ಈತನ ಸ್ನೇಹಿತರಲ್ಲಿ ಒಬ್ಬನಾದ ವಿಜಯ್ ದೀಪ್ ಡಿಜೆ, ದೀಪಕ್ ಬಿಶ್ತ್ ಅವನ ಬಳಿ ಹೋಗಿ ಹಾಡನ್ನು ಬದಲಿಸುವಂತೆ ಹೇಳಿದ್ದಾನೆ. ಆಗ ಬಿಶ್ತ್ ಹಾಡು ಬದಲಾಯಿಸಲು ನಿರಾಕರಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಇಶ್ಮಿತ್, ಆತನ ಸ್ನೇಹಿತರು, ಡಿಜೆ ಮತ್ತು ಇತರ ಬಾರ್ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ. ಆಗ ಬಾರಿನ ಕುರ್ಚಿಗಳನ್ನು ಎಸೆದು ಬಿಯರ್ ಬಾಟಲಿಗಳನ್ನು ಹೊಡೆದಿದ್ದು, ಶಸ್ತ್ರಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ.

ಗಲಾಟೆಯ ಮಧ್ಯದಲ್ಲಿ ಡಿಜೆ ಚಾಕು ತೆಗೆದು ವಿಜಯ್ ದೀಪ್ ಇರಿದಿದ್ದಾನೆ. ಪರಿಣಾಮ ಹುಟ್ಟುಹಬ್ಬದ ಪಾರ್ಟಿಯಲ್ಲಿದ್ದ ವಿಜಯ್ ದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ಈ ಘಟನೆ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಬಾರಿನ ಸಿಬ್ಬಂದಿಗಳು ಸೇರಿದಂತೆ ಎಲ್ಲರೂ ಪರಾರಿಯಾಗಿದ್ದಾರೆ.

ಪಬ್ ನಲ್ಲಿ ಯುವತಿಯೊಬ್ಬಳು ಇದ್ದು, ಗಲಾಟೆಯಲ್ಲಿ ಆಕೆಯ ತಲೆಗೆ ಪೆಟ್ಟಾಗಿದೆ. ನಂತರ ಆಕೆಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ರವಾನಿಸಿದ್ದೇವೆ. ಈ ಘಟನೆಗೆ ಸಂಬಂಧಿಸಿದಂತೆ ಡಿಜೆಯನ್ನು ಬಂಧಿಸಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಾವು ಬಾರಿನ ಸಿಸಿಟಿವಿ ಕ್ಯಾಮೆರಾವನ್ನು ವಶಪಡಿಸಿಕೊಂಡಿದ್ದು, ವಿಜಯ್ ದೀಪ್ ಗೆ ಇರಿದ ಚಾಕುವಿನ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಜೊತೆಗೆ ಈ ಕೊಲೆ ನಡೆದಾಗ ಬಾರಿನಲ್ಲಿದ್ದವರನ್ನು ವಿಚಾರಣೆ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *