6 ವರ್ಷಗಳ ಹಿಂದೆ ತಂದೆ ತಾಯಿಯನ್ನ ಕೊಂದು ಕಾಂಪೌಂಡ್‍ನಲ್ಲಿ ಹೂತಿದ್ದೆ ಎಂದ ಕೊಲೆ ಆರೋಪಿ!

– ಲಿವಿಂಗ್ ಟುಗೆದರ್ ಸಂಗಾತಿಯನ್ನು ಕೊಂದು ಮನೆಯಲ್ಲೇ ಗೋರಿ ಕಟ್ಟಿದ್ದ

ಭೋಪಾಲ್: ವ್ಯಕ್ತಿಯೊಬ್ಬ ಲಿವಿಂಗ್ ಟುಗೆದರ್‍ನಲ್ಲಿದ್ದ ತನ್ನ ಸಂಗಾತಿಯನ್ನು ಕೊಂದು ತನ್ನ ಮನೆಯಲ್ಲೇ ಗೋರಿ ಕಟ್ಟಿದ್ದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದೀಗ ಬಂಧಿತ ಆರೋಪಿ ತನ್ನ ತಂದೆ ತಾಯಿಯನ್ನೂ ಕೊಂದು ಮನೆಯ ಕಾಂಪೌಂಡ್‍ನಲ್ಲಿ ಹೂತಿದ್ದೆ ಎಂದು ಪೊಲೀಸರಿಗೆ ಹೇಳಿದ್ದಾನೆ.

ಮಧ್ಯಪ್ರದೇಶದ ಭೋಪಾಲ್ ನಿವಾಸಿ ಉದ್ಯಾನ್ ದಾಸ್ ಎರಡು ತಿಂಗಳ ಹಿಂದೆ ತನ್ನ ಸಂಗಾತಿ ಆಕಾಂಕ್ಷಾಳನ್ನು ಕೊಂದು ಆಕೆಯ ಶವವನ್ನ ಪೆಟ್ಟಿಗೆಯಲ್ಲಿ ಹಾಕಿ ಮನೆಯಲ್ಲೇ ಗೋರಿ ಕಟ್ಟಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಾನ್ ದಾಸ್‍ನನ್ನು ವಿಚಾರಣೆಗೆ ಒಳಪಡಿಸಿದಾಗ ಈತ 6 ವರ್ಷಗಳ ಹಿಂದೆ ತನ್ನ ತಂದೆ ತಾಯಿಯನ್ನೂ ಕೊಂದಿರುವುದಾಗಿ ಹೇಳಿದ್ದಾನೆ. 2010-11 ರಲ್ಲಿ ತನ್ನ ತಂದೆ ತಾಯಿಯನ್ನು ಕೊಂದು ರಯ್‍ಪುರದ ಮನೆಯ ಕಾಂಪೌಂಡ್‍ನಲ್ಲಿ ಹೂತಿರುವುದಾಗಿ ಉದ್ಯಾನ್ ದಾಸ್ ಹೇಳಿದ್ದಾನೆ.

ಈತ ನೀಡಿರುವ ಈ ಆಘಾತಕಾರಿ ಹೇಳಿಕೆಯ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. ನಾವು ರಾಯ್‍ಪುರಕ್ಕೆ ಪೊಲೀಸ್ ತಂಡವನ್ನು ಕಳಿಸುತ್ತಿದ್ದೇವೆ. ಉದ್ಯಾನ್ ಪದೇ ಪದೇ ಹೇಳಿಕೆಗಳನ್ನು ಬದಲಾಯಿಸುತ್ತಿರುವುದರಿಂದ ಈತ ಹೇಳುವುದೆಲ್ಲವನ್ನೂ ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.

ಮೊದಲು ಉದ್ಯಾನ್ ದಾಸ್ ನೀಡಿದ್ದ ಹೇಳಿಕೆಯಲ್ಲಿ, ಭೋಪಾಲ್‍ನ ಬಿಇಹೆಚ್‍ಇಎಲ್‍ನ ನಿವೃತ್ತ ಅಧಿಕಾರಿಯಾದ ತನ್ನ ತಂದೆ ರಾಯ್‍ಪುರ್‍ನಲ್ಲಿ ಫ್ಯಾಕ್ಟರಿ ನಡೆಸುತ್ತಿದ್ದು, 2010ರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ಹೇಳಿದ್ದ. ತನ್ನ ತಾಯಿ ಇಂದ್ರಾಣಿ ಅಮೆರಿಕದಲ್ಲಿದ್ದಾರೆ ಎಂದು ಹೇಳಿದ್ದ. ಆರೋಪಿ ತುಂಬಾ ಚಾಲಾಕಿಯಾಗಿದ್ದು, ಇಂಗ್ಲಿಷ್‍ನಲ್ಲಿ ಸಾರಾಗವಾಗಿ ಮಾತಾಡ್ತಾನೆ. ಕಾನ್ಫಿಡೆಂಟ್ ಆಗಿ ಸುಳ್ಳು ಹೇಳ್ತಾನೆ ಅಂತ ಪೊಲೀಸರು ಹೇಳಿದ್ದಾರೆ.

ಉದ್ಯಾನ್ ಈ ಹಿಂದೆ ಹೇಳಿದಂತೆ ಐಐಟಿ ಮಾಡಿಲ್ಲ, ಆತ ದ್ವಿತೀಯ ಪಿಯುಸಿ ಪಾಸ್ ಆಗಿದ್ದಾನೆ ಅಷ್ಟೆ. ಈತ ಐಷಾರಾಮಿ ಜೀವನ ನಡೆಸುತ್ತಿದ್ದ. ಈತನ ಪೋಷಕರಿಗೆ ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ ಫ್ಲಾಟ್ ಇದ್ದು, ಅದರಿಂದ ತಿಂಗಳಿಗೆ 10 ಸಾವಿರ ರೂ. ಬಾಡಿಗೆ ಬರುತ್ತದೆ. ರಾಯುಪುರ್‍ನಲ್ಲಿರುವ ಫ್ಲಾಟ್‍ನಿಂದ 7 ಸಾವಿರ ರೂ. ತಿಂಗಳ ಬಾಡಿಗೆ ಹಾಗೂ ಭೋಪಾಲ್‍ನ ಸಾಕೇತ್ ನಗರದಲ್ಲಿ ಈತ ವಾಸವಿರುವ ಕಟ್ಟಡದಲ್ಲಿ ಕೆಳ ಮಹಡಿಯ ಬಾಡಿಗೆ ಮನೆಯಿಂದ 5 ಸಾವಿರ ರೂ. ತಿಂಗಳ ಬಾಡಿಗೆ ಬರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ ಉದ್ಯಾನ್ ಮತ್ತು ಆತನ ತಂದೆಯ ಜಾಯಿಂಟ್ ಅಕೌಂಟ್‍ನಲ್ಲಿ 8.5 ಲಕ್ಷ ಫಿಕ್ಸ್ಡ್ ಡೆಪಾಸಿಟ್ ಇದ್ದು ಇದರ ಬಡ್ಡಿಯೂ ಕೂಡ ಉದ್ಯಾನ್‍ಗೆ ಸಿಗುತ್ತಿತ್ತು. ಉದ್ಯಾನ್ ತನ್ನ ಪೋಷಕರ ಪಿಂಚಣಿ ಹಣವನ್ನೂ ಕೂಡ ಡ್ರಾ ಮಾಡಿಕೊಳ್ಳುತ್ತಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಉದ್ಯಾನ್ ಲಿವಿಂಗ್ ಟುಗೆದರ್‍ನಲ್ಲಿದ್ದ ಗೆಳತಿ ಆಕಾಂಕ್ಷಾಳನ್ನು ಕೊಂದು ಆಕೆಯ ಶವವನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ, ಅದರ ಮೇಲೆ ಸಿಮೆಂಟ್, ನೀರು ಮತ್ತು ಕಾಂಕ್ರೀಟ್ ಸುರಿದು ಮನೆಯಲ್ಲೇ ಗೋರಿ ಕಟ್ಟಿದ್ದ. ಗೋರಿಯನ್ನೇ ತನ್ನ ಮಂಚದಂತೆ ಮಾಡಿಕೊಂಡು ಪ್ರತಿದಿನ ಇದರ ಮೇಲೆ ಮಲಗುತ್ತಿದ್ದ. ಆಕಾಂಕ್ಷಾ ಎರಡು ತಿಂಗಳಿನಿಂದ ಫೋನ್ ಮಾಡದ ಕಾರಣ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕಾಲ್ ಟ್ರೇಸ್ ಮಾಡಿ ಉದ್ಯಾನ್‍ನನ್ನು ಬಂಧಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಅಮೆರಿಕಗೆ ಹೋಗ್ತಿದ್ದೀನಿ ಅಂತ ಹೇಳಿ ಉದ್ಯಾನ್ ಜೊತೆ ಲಿವಿಂಗ್ ಟುಗೆದರ್‍ನಲ್ಲಿದ್ದ ಆಕಾಂಕ್ಷಾ

 

Comments

Leave a Reply

Your email address will not be published. Required fields are marked *