ಮೂರು ವಾರದಾಚೆಗೂ ಅಬ್ಬರಿಸುತ್ತಾ ಮುನ್ನುಗ್ಗುತ್ತಿರೋ ಕುರುಕ್ಷೇತ್ರ!

ಬೆಂಗಳೂರು: ಕನ್ನಡದ ಹೆಮ್ಮೆಯ ಚಿತ್ರ ಕುರುಕ್ಷೇತ್ರ ಕನ್ನಡಿಗರೆಲ್ಲರ ಪ್ರೀತಿ ಗೆಲ್ಲುವಲ್ಲಿ ಯಶ ಕಂಡಿದೆ. ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾದಾಗ ಈ ಸಿನಿಮಾ ಬಗ್ಗೆ ಎಂಥಾ ಕ್ರೇಜ್ ಇತ್ತೋ ಅದು ಈ ಕ್ಷಣಕ್ಕೂ ನಿಗಿನಿಗಿಸುತ್ತಿದೆ. ಪ್ರಾಕೃತಿಕ ವಿಕೋಪ ಸೇರಿದಂತೆ ಎಲ್ಲ ಅಡೆತಡೆಗಳನ್ನೂ ನೀಗಿಕೊಂಡು ಕುರುಕ್ಷೇತ್ರ ಥೇಟರುಗಳಲ್ಲಿ ವಿಜಯ ಯಾತ್ರ ನಡೆಸುತ್ತಿದೆ. ಕಲೆಕ್ಷನ್ನಿನಲ್ಲಿಯೂ ಅಂಥಾದ್ದೇ ದಾಖಲೆ ಮಾಡುತ್ತಿರೋ ಕುರುಕ್ಷೇತ್ರಕ್ಕೆ ಜನ ತೋರುತ್ತಿರೋ ಪ್ರೀತಿ ಕಂಡು ನಿರ್ಮಾಪಕ ಮುನಿರತ್ನ ಸೇರಿದಂತೆ ಇಡೀ ಚಿತ್ರತಂಡವೇ ಖುಷಿಗೊಂಡಿದೆ.

ಕುರುಕ್ಷೇತ್ರದ ಯಶದ ಯಾತ್ರೆ ಯಶಸ್ವಿಯಾಗಿಯೇ ಮೂರು ವಾರಗಳನ್ನು ದಾಟಿಕೊಂಡಿದೆ. ಈ ಚಿತ್ರ ಬಿಡುಗಡೆಯಾಗಿ ಹದಿನೇಳನೇ ದಿನವಾದ ಭಾನುವಾರವಂತೂ ಟಿಕೆಟ್‍ಗಳು ಸೋಲ್ಡ್ ಔಟ್ ಆಗಿದ್ದವು. ಅಷ್ಟಕ್ಕೂ ಬಿಗ್ ಬಜೆಟ್‍ನ ಈ ಚಿತ್ರ ಕರ್ನಾಟಕದಲ್ಲಿ ನೆರೆ ಹಾವಳಿ ಉಲ್ಬಣಿಸಿದ್ದ ಘಳಿಗೆಯಲ್ಲಿಯೇ ಬಿಡುಗಡೆಯಾಗಿತ್ತು. ಉತ್ತರ ಕರ್ನಾಟಕವೇ ಪ್ರವಾಹದಿಂದ ಕಂಗಾಲಾಗಿ, ಕರ್ನಾಟಕದ ಎಲ್ಲಾ ಕಡೆಗಳಲ್ಲಿ ಇಂಥಾದ್ದೇ ವಾತಾವರಣ ಇದ್ದುದರಿಂದ ಪರಿಸ್ಥಿತಿ ಹೇಗಾಗುತ್ತದೋ ಅನ್ನೋ ಆತಂಕವಂತೂ ಇದ್ದೇ ಇತ್ತು. ಆದರೆ ಕುರುಕ್ಷೇತ್ರ ಮನ್ನ ಹೆಮ್ಮೆಯ ಚಿತ್ರವೆಂಬ ಭಾವವೇ ದೊಡ್ಡ ಮಟ್ಟದ ಗೆಲುವಿಗೆ ಬುನಾದಿಯಾಗಿ ಬಿಟ್ಟಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರೋ ಕೌರವೇಶ್ವರನ ಪಾತ್ರವೂ ಸೇರಿದಂತೆ ಬಹುತೇಕ ಪಾತ್ರಗಳು ಕಮಾಲ್ ಮಾಡಿವೆ. ಇದು ದರ್ಶನ್ ಅವರ ಐವತ್ತನೇ ಚಿತ್ರ. ಈ ಮಹತ್ವದ ಘಟ್ಟ ಕೂಡಾ ಮಹಾ ಗೆಲುವೊಂದರ ಮೂಲಕವೇ ಸಮೃದ್ಧವಾಗಿದೆ. ದರ್ಶನ್ ಅಂದರೇನೇ ಬಾಕ್ಸಾಫೀಸ್ ಸುಲ್ತಾನ್ ಎಂಬ ಬಿರುದು ಹೊಂದಿರೋ ನಟ. ಆ ಬಿರುದಿಗೆ ಮತ್ತಷ್ಟು ಗರಿ ಮೂಡಿಸುವಂಥಾ ಗೆಲುವಿನತ್ತ ಕುರುಕ್ಷೇತ್ರ ಮುನ್ನುಗ್ಗುತ್ತಿದೆ. ಯಾಕೆಂದರೆ ನೂರು ಕೋಟಿಯನ್ನು ಮೀರಿ ಕಲೆಕ್ಷನ್ನು ಮಾಡಿದ ದರ್ಶನ್ ಅಭಿನಯದ ಮೊದಲ ಚಿತ್ರವಾಗಿಯೂ ಕುರುಕ್ಷೇತ್ರ ದಾಖಲಾಗೋ ಲಕ್ಷಣಗಳಿವೆ.

Comments

Leave a Reply

Your email address will not be published. Required fields are marked *