ಕುರುಕ್ಷೇತ್ರದಲ್ಲಿ ಕೃಷ್ಣನ ರುಕ್ಮಿಣಿ ಯಾರು?

ಬೆಂಗಳೂರು: ಪ್ರೇಮದ ಎಲ್ಲ ಮಗ್ಗುಲುಗಳನ್ನೂ ಎರಕ ಹೊಯ್ದಂಥಾ ಸಿನಿಮಾಗಳು, ಹಾಡುಗಳ ಮೂಲಕವೇ ಕನಸುಗಾರನಾಗಿ ಗುರುತಿಸಿಕೊಂಡಿರುವವರು ಕ್ರೇಜಿಸ್ಟಾರ್ ರವಿಚಂದ್ರನ್. ಅವರೀಗ ಇದೇ ವಾರ ಬಿಡುಗಡೆಯಾಗಲಿರೋ ಕುರುಕ್ಷೇತ್ರ ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರ ಮಾಡಿದ್ದಾರೆ. ಈಗಾಗಲೇ ಅವರ ಲುಕ್‍ಗಳೂ ಕೂಡಾ ಬಿಡುಗಡೆಗೊಂಡಿವೆ. ಅವು ಜನರಿಗಿಷ್ಟವೂ ಆಗಿವೆ. ಆದರೆ ಈ ಕೃಷ್ಣ ಪರಮಾತ್ಮನನ್ನು ಈವರೆಗೆ ಯಾವ ಚಿತ್ರಗಳಲ್ಲಿಯೂ ಸಿಂಗಲ್ ಆಗಿ ಅಭಿಮಾನಿಗಳ್ಯಾರೂ ನೋಡಿಲ್ಲ. ಆದರೆ ಕುರುಕ್ಷೇತ್ರದಲ್ಲಿ ಅವರಿಗೆ ಜೋಡಿಯಿಲ್ಲವೇ ಎಂಬ ಪ್ರಶ್ನೆ ಹಲವರನ್ನು ಕಾಡಿದ್ದಿದೆ.

ಅಷ್ಟಕ್ಕೂ ಕೃಷ್ಣ ಇದ್ದಾನೆಂದರೆ ಅಲ್ಲಿ ರುಕ್ಮಿಣಿ ಇಲ್ಲದಿದ್ದರೆ ಹೇಗೆ? ಕುರುಕ್ಷೇತ್ರದಲ್ಲಿಯೂ ಕೃಷ್ಣಾವತಾರಿ ರವಿಮಾಮನಿಗೆ ರುಕ್ಮಿಣಿಯೊಬ್ಬಳ ಸಾಥ್ ಸಿಕ್ಕಿದೆ. ಆದರೆ ಈ ಬೃಹತ್ ತಾರಾಗಣದ ನಡುವೆ ಈ ರುಕ್ಮಿಣಿಯತ್ತ ಅಷ್ಟಾಗಿ ಯಾರೂ ಗಮನಹರಿಸಿರಲಿಲ್ಲ. ಒರಿಜಿನಲ್ ಕೃಷ್ಣ ಪರಮಾತ್ಮನಿಗೆ ಹದಿನಾರು ಸಾವಿರ ಸಖಿಯರಿದ್ದರೆಂದು ಹೇಳಲಾಗುತ್ತದೆ. ಹಾಗಿರುವಾಗ ಈ ಕುರುಕ್ಷೇತ್ರದಲ್ಲಿ ಒಬ್ಬರಾದರೂ ಬೇಡವೇ ಅಂತ ಅಭಿಮಾನಿಗಳು ಅಂದುಕೊಂಡಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಖುದ್ದು ರವಿಚಂದ್ರನ್ ಅವರೇ ಪತ್ರಿಕಾಗೋಷ್ಠಿಯೊಂದರಲ್ಲಿ ಈ ಬಗ್ಗೆ ತಮಾಷೆಯಾಗಿ ಹೇಳಿಕೊಂಡಿದ್ದರು. ಇದೆಲ್ಲದರಿಂದ ಕೃಷ್ಣನಿಗೊಬ್ಬಳು ರುಕ್ಮಿಣಿಯನ್ನು ಜೊತೆಯಾಗಿಸಲಾಗಿದೆ.

ಕುರುಕ್ಷೇತ್ರದಲ್ಲಿ ಕೃಷ್ಣನಿಗೆ ಜೋಡಿಯಾಗಿ ಪ್ರಗ್ಯಾ ಜೈಸ್ವಾಲ್ ನಟಿಸಿದ್ದಾರೆ. ಈಕೆಯ ಪಾತ್ರಕ್ಕೆ ಇಲ್ಲಿ ಹೆಚ್ಚೇನೂ ಮಹತ್ವ ಇಲ್ಲದೇ ಹೋದರೂ ಈ ಬಗ್ಗೆ ಪ್ರಗ್ಯಾ ಖುಷಿ ಹೊಂದಿದ್ದಾರಂತೆ. ಕಡೆಗೂ ತಮ್ಮ ಪಾತ್ರಕ್ಕೊಂದು ಜೋಡಿ ಸಿಕ್ಕ ಬಗ್ಗೆ ರವಿಚಂದ್ರನ್ ಅವರಿಗೂ ಖುಷಿ ಇರೋದು ಸುಳ್ಳೇನಲ್ಲ. ಅಂದಹಾಗೆ ಈ ಪ್ರಗ್ಯಾ ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಬಹಳಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವಾಕೆ. ತೆಲುಗು ಮಾತ್ರವಲ್ಲದೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬೇಡಿಕೆ ಹೊಂದಿರೋ ಈಕೆ ಕುರುಕ್ಷೇತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *