ತಲ್ವಾರ್‌ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ನಗರಸಭೆ ಸದಸ್ಯೆ ಪತಿ

ರಾಯಚೂರು: ಜನಪ್ರತಿನಿಧಿಗಳು ಅಂದ್ರೆ ಸಾಮಾಜಿಕ ಜವಾಬ್ದಾರಿ ಇರುವವರು ಅನ್ನೋದು ರಾಯಚೂರಿನ ಪಾಲಿಗೆ ಯಾಕೋ ಅನ್ವಯವಾಗುವ ಹಾಗೇ ಕಾಣುತ್ತಿಲ್ಲ. ನಗರಸಭೆ ವಾರ್ಡ್ ನಂ.27ರ ಸದಸ್ಯೆ ಪಿ.ನವನೀತಾ ಪತಿ ಪೋಗಲ್ ಶ್ರೀನಿವಾಸ್ ರೆಡ್ಡಿ ತನ್ನ ಹುಟ್ಟು ಹಬ್ಬಕ್ಕೆ ತಲ್ವಾರ್ ಹಿಡಿದು ಕೇಕ್ ಕತ್ತರಿಸಿ, ತಲ್ವಾರ್ ಎತ್ತಿತೋರಿಸುವ ಮೂಲಕ ದರ್ಪ ಮೆರೆದಿದ್ದಾರೆ.

ಬಿಜೆಪಿ ಸದಸ್ಯೆಯ ಪತಿ ಶ್ರೀನಿವಾಸ್ ರೆಡ್ಡಿ ತನ್ನ ಹಿಂಬಾಲಕರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು ತಲ್ವಾರ್ ಹಿಡಿದು ಸಂಭ್ರಮಿಸಿದ್ದಾರೆ. ಹಿಂಬಾಲಕರು ತಲ್ವಾರ್ ಹಿಡಿದು ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಶ್ರೀನಿವಾಸ್ ರೆಡ್ಡಿ ಹುಟ್ಟುಹಬ್ಬಕ್ಕೆ ಸ್ಥಳೀಯ ರಾಜಕೀಯ ಮುಖಂಡರು ಭಾಗವಹಿಸಿ ಮುಜುಗರ ಅನುಭವಿಸಿದ್ದಾರೆ. ತಲ್ವಾರ್‌ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಮಹಿಳಾ ಶೌಚಾಲಯ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡ

ಇತ್ತೀಚೆಗೆ ರಾಯಚೂರು ತಾಲೂಕಿನ ಚಂದ್ರಬಂಡಾ ಗ್ರಾಮದಲ್ಲಿ ಮದುವೆ ಸಮಾರಂಭವೊಂದರಲ್ಲಿ ಗ್ರಾಮಪಂಚಾಯತ್ ಸದಸ್ಯರು ಯುವತಿಯರೊಂದಿಗೆ ಅಸಹ್ಯವಾಗಿ ನೃತ್ಯ ಮಾಡಿ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ನಗರಸಭೆ ಸದಸ್ಯೆಯ ಪತಿರಾಯ ಹುಟ್ಟುಹಬ್ಬಕ್ಕೆ ತಲ್ವಾರ್ ಹಿಡಿದು ದರ್ಪದ ಸಂಭ್ರಮಾಚರಣೆ ಮಾಡಿದ್ದಾರೆ. ಇದನ್ನೂ ಓದಿ: ಆಧಾರ್ ಹಂಚಿಕೊಳ್ಳುವಾಗ ಮಾಸ್ಕ್‌ಡ್ ಆಧಾರ್ ಬಳಸಿ: ಕೇಂದ್ರದ ಸಲಹೆ

ಈ ಹಿಂದೆಯೂ ಇಂತಹ ಹಲವು ಘಟನೆಗಳು ಜಿಲ್ಲೆಯಲ್ಲಿ ಜರುಗಿದ್ದು, ಪೊಲೀಸ್ ಇಲಾಖೆ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರೂ ಮತ್ತೇ ಮತ್ತೇ ಮರುಕಳಿಸುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲಿ ತಲ್ವಾರ್ ಹಿಡಿದ ದೃಶ್ಯಾವಳಿಗಳು ಹರಿದಾಡುತ್ತಿದ್ದಂತೆ ಈ ಘಟನೆ ಕುರಿತಾಗಿ ಸಾರ್ವಜನಿಕರಿಂದ ಖಂಡನೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *