ಈ 21 ದಿನ ಪತ್ನಿಯನ್ನು ಹೇಗೆ ಖುಷಿಯಾಗಿ ನೋಡಿಕೊಳ್ಳಬೇಕೆಂದು ತಿಳಿಸಿಕೊಟ್ಟ ಶಾಹಿದ್

ಮುಂಬೈ: ದೇಶ ಲಾಕ್‍ಡೌನ್ ಆದ ಈ 21 ದಿನಗಳಲ್ಲಿ ತಮ್ಮ ಹೆಂಡತಿಯನ್ನು ಹೇಗೆ ಖುಷಿಯಾಗಿ ಇಟ್ಟುಕೊಳ್ಳಬೇಕು ಎಂದು ಬಾಲಿವುಡ್ ನಟ ಶಾಹಿದ್ ಕಪೂರ್ ಅವರು ತಿಳಿಸಿಕೊಟ್ಟಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಮಂಗಳವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ದೇಶವನ್ನು ಏಪ್ರಿಲ್ 14ರ ವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಈ ಮೂಲಕ 21 ದಿನಗಳ ಕಾಲ ಮನೆಯಿಂದ ಯಾರೂ ಹೊರಗೆ ಬಾರದಂತೆ ನಿರ್ಬಂಧ ಹೇರಿದ್ದಾರೆ. ಹೀಗಾಗಿ ಸೆಲಿಬ್ರೆಟಿಗಳು ಮನೆಯಲ್ಲೇ ಉಳಿದಿದ್ದಾರೆ.

ಹೀಗೆ ಮನೆಯಲ್ಲೇ ಕಾಲ ಕಳೆಯುತ್ತಿರುವ ನಟ ಶಾಹಿದ್ ಕಪೂರ್ ಅವರು, ಮನೆಯಲ್ಲಿರಿ, ಸುರಕ್ಷಿತವಾಗಿರಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಿ. ಪ್ರೀತಿಯನ್ನು ಹಂಚಿರಿ. ನಂಬಿಕೆ ಇರಲಿ. ಆಗಾಗ ಪ್ರಾರ್ಥಿಸಿ. ಪ್ರತಿದಿನವೂ ತಮಗೆ ಮುಖ್ಯವಾದ ಎಲ್ಲರೊಂದಿಗೆ ಮಾತನಾಡಿ. ಧ್ಯಾನ ಮಾಡಿ, ಪುಸ್ತಕ ಓದಿ, ಪ್ರತಿದಿನ ಆಕಾಶದ ನೀಲಿ ಬಣ್ಣವನ್ನು ನೋಡಿ. 21 ದಿನಗಳು ಬೇಗ ಹೋಗುತ್ತೆ ಎಂದು ಟ್ವೀಟ್ ಮಾಡಿದ್ದಾರೆ.

ಇದಾದ ನಂತರ ಶಾಹಿದ್ ಅವರು ನನಗೆ ಏನಾದರೂ ಪ್ರಶ್ನೆ ಕೇಳಲು ಬಯಸುತ್ತೀರಾ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅವರ ಅಭಿಮಾನಿಯೋರ್ವ ಈ 21 ದಿನಗಳ ಲಾಕ್‍ಡೌನ್ ಸಮಯದಲ್ಲಿ ನಿಮ್ಮ ಹೆಂಡತಿಯನ್ನು ಹೇಗೆ ನೋಡಿಕೊಳ್ಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರಿಸಿದ ಶಾಹಿದ್, ಮನಃಪೂರ್ವಕವಾಗಿ ಸೇವೆ ಮಾಡಿ ನಿಮ್ಮ ಬಾಸ್ ಯಾವಗಲೂ ಬಾಸ್ ಆಗಿ ಇರುತ್ತಾರೆ ಎಂದು ರೀಟ್ವೀಟ್ ಮಾಡಿದ್ದಾರೆ.

ಜೊತೆಯಲ್ಲಿ ಕೆಲವರು ನೀವು 21 ದಿನಗಳ ಈ ಲಾಕ್‍ಡೌನ್ ಸಮಯದಲ್ಲಿ ಏನೂ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಶಾಹಿದ್ ಈ 21 ದಿನ ನಾನು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತೇನೆ ಎಂದು ಉತ್ತರಿಸಿದ್ದಾರೆ. ಇನ್ನೂ ಕೆಲವರು ಈಗ ನೀವು ಐಸ್‍ಕ್ರೀಮ್ ತಿನ್ನುತ್ತೀರಾ ಎಂದು ಕೇಳಿದ್ದಾರೆ. ಆಗ ಶಾಹಿದ್ ಇಲ್ಲ ದಿನ 20 ನಿಮಿಷಕ್ಕೆ ಒಂದು ಬಾರಿ ಬೆಚ್ಚಗಿರುವ ನೀರನ್ನು ಕುಡಿಯುತ್ತೇನೆ ಎಂದು ಹೇಳಿದ್ದಾರೆ.

ಟ್ವಿಟ್ಟರ್‍ನಲ್ಲಿ ಮೊತ್ತೊಬ್ಬ ಶಾಹಿದ್ ಅಭಿಮಾನಿ ನೀವು ಅಜಯ್ ದೇವ್‍ಗನ್ ಅವರ ತನ್ಹಾಜಿ ಸಿನಿಮಾ ಬಗ್ಗೆ ಏನು ಹೇಳುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ರೀಟ್ವೀಟ್ ಮಾಡಿರುವ ಶಾಹಿದ್ ತುಂಬಾ ಖುಷಿಕೊಡುವ ಸಿನಿಮಾ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಾಹಿದ್ ಕಪೂರ್ ಅವರು ಕೊನೆಯದಾಗಿ ಕಬೀರ್ ಸಿಂಗ್ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಸಿನಿಮಾ ಬಾಲಿವುಡ್‍ನಲ್ಲಿ ಬ್ಲಾಕ್ ಬಾಸ್ಟರ್ ಹಿಟ್ ಆಗಿತ್ತು.

Comments

Leave a Reply

Your email address will not be published. Required fields are marked *