ರಿಷಿ ಕಪೂರ್ ಅಂತ್ಯಕ್ರಿಯೆಯಲ್ಲಿ ಐಫೋನ್ ಹಿಡಿದು ಟ್ರೋಲ್ ಆದ ಆಲಿಯಾ

ಮುಂಬೈ: ಬಾಲಿವುಡ್‍ನ ಖ್ಯಾತ ನಟ ರಿಷಿ ಕಪೂರ್ ಅವರ ಅಂತ್ಯಕ್ರಿಯೆ ವೇಳೆ ನಟಿ ಆಲಿಯಾ ಭಟ್ ಅವರು ತಮ್ಮ ಐಫೋನ್ ಹಿಡಿದುಕೊಂಡಿರುವುದು ಈಗ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ.

ರಿಷಿ ಕಪೂರ್ ಅವರ ಅಂತ್ಯಕ್ರಿಯೆಗೆ ತೆರಳಿದ್ದ ಆಲಿಯಾ ಭಟ್ ಐಫೋನ್ ಹಿಡಿದುಕೊಂಡಿದ್ದರು. ಈ ಫೋಟೋ ಈಗ ವೈರಲ್ ಆಗಿದೆ. ಇದನ್ನು ಕಂಡ ನೆಟ್ಟಿಗರು ಮತ್ತು ಟ್ರೋಲಿಗರು ಈ ರೀತಿಯ ದುಃಖದ ಸಮಯದಲ್ಲೂ ನೀವು ಫೋನ್ ಹಿಡುದುಕೊಳ್ಳಬೇಕಾ? ಅಂತ್ಯಕ್ರಿಯೆ ಅನ್ನು ರೆಕಾರ್ಡ್ ಮಾಡಬೇಕಾ? ಎಂದು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದರು.

ಆದರೆ ಅಂತ್ಯಕ್ರಿಯೆ ವೇಳೆಯೂ ಆಲಿಯಾ ಫೋನ್ ಹಿಡಿದುಕೊಂಡಿರುವುದಕ್ಕೆ ಕಾರಣವಿದೆ. ರಿಷಿ ಕಪೂರ್ ಅವರ ಮಗಳು ರಿದ್ಧಿಮಾ ಕಪೂರ್ ಅವರು ಲಾಕ್‍ಡೌನ್ ಇರುವುದರಿಂದ ದೆಹಲಿಯಿಂದ ಮುಂಬೈಗೆ ಬಂದು ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಗಲಿಲ್ಲ. ಈ ಕಾರಣಕ್ಕೆ ಅವರು ಆಲಿಯಾ ಫೋನ್‍ಗೆ ವಿಡಿಯೋ ಕಾಲ್ ಮಾಡಿದ್ದಾರೆ. ಈ ಮೂಲಕ ತಂದೆಯ ಅಂತ್ಯಸಂಸ್ಕಾರವನ್ನು ನೋಡಿದ್ದಾರೆ. ಆದರೆ ಇದು ತಪ್ಪು ಕಲ್ಪನೆಯಾಗಿ ಆಲಿಯಾ ಅವರು ಟ್ರೋಲ್ ಆಗಿದ್ದಾರೆ.

ತಂದೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಿದ್ಧಿಮಾ ಚಾರ್ಟರ್ ಫ್ಲೈಟ್ ಮೂಲಕ ತೆರಳಲು ಅನುಮತಿ ನೀಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಇತ್ತ ದೆಹಲಿ ಪೊಲೀಸರು ರಸ್ತೆ ಮಾರ್ಗವಾಗಿ ತೆರಳಲು ಅನುಮತಿ ನೀಡಿದ್ದರು. ರಸ್ತೆ ಮೂಲಕ 1400 ಕಿ.ಮೀ. ಪ್ರಯಾಣ ಮಾಡಬೇಕು. ಹಾಗಾಗಿ ಕುಟುಂಬಸ್ಥರು ಪುತ್ರಿಯ ಅನುಪಸ್ಥಿತಿಯಲ್ಲಿ ರಿಷಿ ಕಪೂರ್ ಅವರ ಅಂತ್ಯಕ್ರಿಯೆ ನಡೆಸಿದ್ದರು.

ಸುಮಾರು ಎರಡು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳುತ್ತಿದ್ದ ಬಾಲಿವುಡ್‍ನ ಲೆಜೆಂಡ್ ರಿಷಿ ಕಪೂರ್, ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ವಾಪಸ್ಸಾಗಿದ್ದರು. ಆ ನಂತರ ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ಗುರುವಾರ ಸಾವನ್ನಪ್ಪಿದ್ದರು. ಒಬ್ಬ ಒಳ್ಳೆಯ ನಟನನ್ನು ಕಳೆದುಕೊಂಡಿದ್ದಕ್ಕೆ ಇಡೀ ಭಾರತ ಚಿತ್ರರಂಗವೇ ಕಂಬನಿ ಮಿಡಿದಿತ್ತು.

ಆಲಿಯಾ ರಣಬೀರ್ ಮದುವೆ
ಆಲಿಯಾ ಭಟ್ ಮತ್ತು ರಿಷಿ ಕಪೂರ್ ಅವರ ಪುತ್ರ ರಣಬೀರ್ ಕಪೂರ್ ಅವರ ಮದುವೆ ಈಗಾಗಲೇ ನಿಶ್ಚಯವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮದುವೆಯ ವಿಚಾರವಾಗಿ ಈಗಾಗಲೇ ಎರಡು ಕುಟಂಬದ ಮಧ್ಯೆ ಮಾತುಕತೆ ನಡೆದಿತ್ತು. ಎಲ್ಲ ಅಂದುಕೊಂಡಂತೆ ಅಗಿದ್ದರೆ ಮದುವೆ ಸುದ್ದಿ ಘೋಷಣೆಯಾಗಬೇಕಿತ್ತು. ಆದರೆ ಮಗನ ಮದುವೆ ನೋಡದೆ ರಿಷಿ ಕಪೂರ್ ಅವರು ಬಾರದ ಲೋಕಕ್ಕೆ ತೆರಳಿದ್ದಾರೆ.

Comments

Leave a Reply

Your email address will not be published. Required fields are marked *