ಮುಂಬೈ: ಕಾರಲ್ಲಿ ಮಹಿಳೆ ತನ್ನ 7 ತಿಂಗಳ ಮಗುವಿಗೆ ಹಾಲುಣಿಸುವಾಗಲೇ ಟ್ರಾಫಿಕ್ ಪೊಲೀಸರು ಅಮಾನವೀಯವಾಗಿ ವರ್ತಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಈ ಘಟನೆ ಶುಕ್ರವಾರ ಮಲಾಡ್ ವೆಸ್ಟ್ ನಲ್ಲಿ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರದ ಜ್ಯೋತಿ ಎಂಬವರು ಪೊಲೀಸರ ಹತ್ತಿರ ತನ್ನ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಪ್ರಿಸ್ಕ್ರಿಪ್ಷನ್ ಲೆಟರ್ ತೋರಿಸಿದ್ರೂ ಅವರ ಮಾತನ್ನು ಕೇಳದೆ, ಕರುಣೆಯೂ ತೋರದೆ ಫೋನಿನಲ್ಲಿ ಮಾತನಾಡಿಕೊಂಡು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
`ನಾನು ನನ್ನ 7 ತಿಂಗಳ ಮಗುವಿಗೆ ಹಾಲುಣಿಸುತ್ತಿದ್ದೇನೆ ಎಂದು ಹೇಳಿದೆ. ಆ ವೇಳೆ ನನ್ನನ್ನು ಕಾರಿನಿಂದ ಇಳಿಯೋದಕ್ಕೂ ಅವಕಾಶ ನೀಡಿಲ್ಲ. ನನ್ನ ಕಾರು ನಿಲ್ಲಿಸಿದ್ದ ಜಾಗದಲ್ಲೇ ಇನ್ನೂ ಎರಡೂ ಕಾರಗಳು ನಿಂತಿದ್ದವು. ಆದರೆ ಪೊಲೀಸರು ನನ್ನ ಕಾರನ್ನು ಆಯ್ಕೆ ಮಾಡಿ ನಂತರ ಟೋಯಿಂಗ್ ಮಾಡಿ ಕಾರನ್ನು ಎಳೆದುಕೊಂಡೇ ಹೋದರು. ಅಲ್ಲಿ ಇದ್ದ ಜನರು ಮಗು ಹಾಗೂ ತಾಯಿಗೆ ತೊಂದರೆ ಆಗುತ್ತದೆ ಎಂದು ಸಾಕಷ್ಟು ಹೇಳಿದ್ರೂ ಅವರ ಮಾತನ್ನು ಕೇಳಲಿಲ್ಲ ಎಂದು ಜ್ಯೋತಿ ಹೇಳಿದ್ದಾರೆ.
https://twitter.com/MuzzammilAap/status/929259260030185472
ಘಟನೆ ಬಳಿಕ ಮುಂಬೈನ ಜಂಟಿ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಶೀಘ್ರದಲ್ಲೇ ವಿಚರಣೆ ನಡೆಸಲು ಉಪ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸುವಂತೆ ಆದೇಶಿಸಿದ್ದಾರೆ. ಅಲ್ಲದೇ ಘಟನೆಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಭಾನುವಾರ ಪರಿಶೀಲನೆ ನಡೆಸುವುದಾಗಿ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.
ಶಶಾಂಕ್ ರಾಣೆ ಎಂಬ ಪೊಲೀಸ್ ಅಧಿಕಾರಿ ತನ್ನ ಹೆಸರಿನ ಬ್ಯಾಚ್ ಅನ್ನು ಕೂಡ ಹಾಕದೆ ಇದಿದ್ದು ಮುಂಬೈ ಪೊಲೀಸ್ ನಿಯಮವನ್ನು ಮುರಿದಿದ್ದಾರೆ.

Leave a Reply